ಬಿಹಾರದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದೆ. ಬಿಹಾರದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು ಹಾಗೂ ಮೂವರು ಸಚಿವರಿಗೆ ಕೊರೊನಾ ಸೋಂಕು ತಗುಲಿದೆ. ಇಂದು ರಾಜ್ಯ ಸಚಿವ ಸಂಪುಟ ಸಭೆಗೂ ಮುನ್ನ ಈ ಮಾಹಿತಿ ಹೊರಬಿದ್ದಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಬಿಹಾರ ಸರ್ಕಾರವು ನಿನ್ನೆ ನೈಟ್ ಕರ್ಫ್ಯೂ ಆದೇಶವನ್ನು ಜಾರಿ ಮಾಡಿತ್ತು. ಈ ಆದೇಶದ ಪ್ರಕಾರ ಇಂದಿನಿಂದ ಜನವರಿ 21ರವರೆಗೆ ಬಿಹಾರದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಇರಲಿದೆ. ಎಲ್ಲಾ ಶಾಪಿಂಗ್ ಮಾಲ್ಗಳು, ಸಿನಿಮಾ ಹಾಲ್ಗಳು, ಪಾರ್ಕ್ಗಳು, ಜಿಮ್ಗಳು ಈ ಅವಧಿಯಲ್ಲಿ ಬಂದ್ ಇರಲಿವೆ ಎಂದು ಬಿಹಾರ ಸರ್ಕಾರ ಹೇಳಿದೆ.
ಸೋಮವಾರ ರಾತ್ರಿ ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗಿಯಾಗಿದ್ದ ಸಾಪ್ತಾಹಿಕ ಜನತಾ ದರ್ಬಾರ್ ಕಾರ್ಯಕ್ರಮದಲ್ಲಿದ್ದ ಒಟ್ಟ ಆರು ಮಂದಿ ಸಂದರ್ಶಕರಿಗೆ ಕೊರೊನಾ ಸೋಂಕು ತಗುಲಿದೆ. ಸಿಎಂ ಗೃಹ ಕಚೇರಿಯ ಅಡುಗೆ ಸಿಬ್ಬಂದಿಗೂ ಕೋವಿಡ್ ಸೋಂಕು ಧೃಡಪಟ್ಟಿದೆ.
ಇಬ್ಬರು ಉಪಮುಖ್ಯಮಂತ್ರಿಗಳಾದ ತಾರಕಿಶೋರ್ ಪ್ರಸಾದ್ ಹಾಗೂ ರೇಣು ದೇವಿ ಮತ್ತು ಸಚಿವರಾದ ಅಶೋಕ್ ಚೌಧರಿ, ಸುನೀಲ್ ಕುಮಾರ್ ಹಾಗೂ ಸಂತೋಷ್ ಮಾಂಜಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ನಿನ್ನೆಯಷ್ಟೇ ಜೆಡಿ(ಯು) ರಾಷ್ಟ್ರಾಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಹಾಗೂ ಬಿಹಾರ ಮಾಜಿ ಸಿಎಂ ಜಿತನ್ ರಾಮ್ ಮಾಂಜಿಗೂ ಕೊರೊನಾ ಸೋಂಕು ಧೃಡಪಟ್ಟಿತ್ತು.