ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಮೂರನೇ ಅಲೆಯ ಅಪಾಯಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್ 27ರಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕರೆದಿದ್ದ ಸಭೆಯಲ್ಲಿ ಭಾಗಿಯಾಗಿದ್ದ ಈ ತಜ್ಞರು ಮುಂಬರುವ ಹಬ್ಬಗಳನ್ನು ಸೀಮಿತ ಸಂಖ್ಯೆಯ ಜನಮಿತಿಯ ಜೊತೆ ಆಚರಿಸಬೇಕೆಂದು ಸೂಚನೆ ನೀಡಿದ್ದರು.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪರಾಜ್ಯಪಾಲ ಅನಿಲ್ ಬೈಜಲ್, ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್ ಕೂಡ ಭಾಗಿಯಾಗಿದ್ದರು. ಈ ಸಭೆಯಲ್ಲಿ ವಿ.ಕೆ. ಪಾಲ್ ಈವರೆಗೆ ಕೊರೊನಾದಲ್ಲಿ ಸಾಧಿಸಿದ ಯಶಸ್ಸನ್ನು ನಾವು ಹಬ್ಬಗಳ ಸರಣಿಯಲ್ಲಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಪಾಲ್ ನೀಡಿರುವ ಮಾಹಿತಿಯ ಪ್ರಕಾರ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಕೊರೊನಾ ಮೂರನೇ ಅಲೆ ದೇಶಕ್ಕೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ.
ಸರಣಿ ಹಬ್ಬಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಮೂರನೇ ಅಲೆಯು ಅಕ್ಟೋಬರ್ – ನವೆಂಬರ್ ತಿಂಗಳಲ್ಲಿ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಜನತೆ ಹಬ್ಬಗಳನ್ನು ಆದಷ್ಟು ಸರಳವಾಗಿ ಆಚರಿಸುವಂತೆ ನೋಡಿಕೊಳ್ಳಲೇಬೇಕಿದೆ ಎಂದು ಪಾಲ್ ಸೂಚನೆ ನೀಡಿದ್ದಾರೆ.
ಈ ಅವಧಿಯಲ್ಲಿ ಸರ್ಕಾರ ಸೋಂಕು ಪತ್ತೆ ಹಚ್ಚುವ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಬೇಕಿದೆ. ಸಾಮಾನ್ಯ ಜ್ವರ ಹಾಗೂ ಕೋವಿಡ್ 19 ಭಾಗಶಃ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿರೋದ್ರಿಂದ ಸಮೀಕ್ಷೆ ಸೂಕ್ತ ರೀತಿಯಲ್ಲಿ ನಡೆಯಬೇಕು ಎಂದು ಪಾಲ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಪಾಲ್ರ ಸಲಹೆಯನ್ನು ಬೆಂಬಲಿಸಿದ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ, ಕೋವಿಡ್ ಪರೀಕ್ಷೆಗಳನ್ನು ಇನ್ನಷ್ಟು ಚುರುಕುಗೊಳಿಸಿದಲ್ಲಿ ಮಾತ್ರ ಸೋಂಕು ಪತ್ತೆ ಹಚ್ಚುವಿಕೆ ವೇಗ ಪಡೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಕೋವಿಡ್, ಡೆಂಗ್ಯೂ ಪ್ರಕರಣಗಳ ಜೊತೆಯಲ್ಲಿ ವೈರಲ್ ಜ್ವರ ಹೊಂದಿರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಲಿದೆ ಎಂದು ಹೇಳಿದ್ದಾರೆ.