ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಶ್ಚಿಮಬಂಗಾಳದಲ್ಲಿ ಚುನಾವಣೆ ರ್ಯಾಲಿಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ. ದೊಡ್ಡ ಸಾರ್ವಜನಿಕ ರ್ಯಾಲಿ, ಸಮಾರಂಭಗಳನ್ನು ನಡೆಸುವ ಪರಿಣಾಮಗಳ ಬಗ್ಗೆ ಎಲ್ಲ ರಾಜಕಾರಣಿಗಳು ಯೋಚಿಸುವಂತೆ ಅವರು ಸಲಹೆ ನೀಡಿದ್ದಾರೆ.
ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ನಾನು ಪಶ್ಚಿಮಬಂಗಾಳದಲ್ಲಿ ಎಲ್ಲಾ ಸಾರ್ವಜನಿಕ ಸಮಾರಂಭಗಳನ್ನು ರದ್ದುಗೊಳಿಸಿದ್ದೇನೆ. ರಾಜಕೀಯ ನಾಯಕರು ಇಂತಹ ಸಂದರ್ಭದಲ್ಲಿ ದೊಡ್ಡ ರ್ಯಾಲಿಗಳನ್ನು ನಡೆಸುವ ಪರಿಣಾಮಗಳ ಬಗ್ಗೆ ಯೋಚಿಸಬೇಕು ಎಂದು ಎಲ್ಲ ರಾಜಕೀಯ ಮುಖಂಡರಿಗೆ ಸಲಹೆ ನೀಡುತ್ತೇನೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ದೇಶದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಮಧ್ಯೆ ರಾಜಕೀಯ ರ್ಯಾಲಿ ನಡೆಸಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಕಾಂಗ್ರೆಸ್ ಟೀಕಿಸಿದೆ. ಕೊರೋನಾ ಪ್ರಕರಣ ಹೆಚ್ಚುತ್ತಿರುವ ಮಧ್ಯೆ ಮತದಾನ ನಡೆಯುತ್ತಿರುವ ಬಂಗಾಳದಲ್ಲಿ ದೊಡ್ಡ ರಾಜಕೀಯ ರ್ಯಾಲಿ ನಡೆಸಿದ್ದಕ್ಕಾಗಿ ಪ್ರಧಾನಮಂತ್ರಿ ನಿರ್ಲಕ್ಷ ತೋರಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಆರೋಪಿಸಿದ್ದಾರೆ.
ಸೋಂಕು ನಿವಾರಿಸುವಲ್ಲಿ ಪ್ರಧಾನ ಮಂತ್ರಿಗಳು ತಮ್ಮ ಕುರ್ಚಿಯಲ್ಲಿ ಕುಳಿತು ಮುಖ್ಯಮಂತ್ರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ಚುನಾವಣೆ ರ್ಯಾಲಿಗೆ ಕಡಿವಾಣ ಹಾಕಬೇಕು ಎಂದು ಹೇಳಿದ್ದಾರೆ.