ಕೋವಿಡ್ 19ನಿಂದ ಮೃತಪಟ್ಟವರ ಮರಣ ಪ್ರಮಾಣ ಪತ್ರಗಳನ್ನು ಕುಟುಂಬಸ್ಥರಿಗೆ ನೀಡುವ ಸಂಬಂಧ ಮಾರ್ಗಸೂಚಿಯನ್ನು ರೂಪಿಸದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಸೆಪ್ಟೆಂಬರ್ 11ರ ಒಳಗಾಗಿ ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಈ ಸಂಬಂಧ ಈಗಾಗಲೇ ನಾವು ಆದೇಶ ಜಾರಿಗೆ ತಂದಿದ್ದೇವೆ. ಈಗಾಗಲೇ ಒಂದು ಬಾರಿ ಸಮಯಾವಕಾಶವನ್ನೂ ವಿಸ್ತರಿಸಲಾಗಿದೆ. ನೀವು ಮಾರ್ಗಸೂಚಿ ರೂಪಿಸುವ ಹೊತ್ತಿಗೆ ಕೊರೊನಾ ಮೂರನೇ ಅಲೆಯು ಮುಕ್ತಾಯಗೊಳ್ಳುತ್ತದೆ ಎನಿಸುತ್ತದೆ ಎಂದು ನ್ಯಾ. ಎಂ.ಆರ್. ಶಾ ಹಾಗೂ ಅನಿರುದ್ಧ ಬೋಸ್ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಅರ್ಜಿದಾರ ವಕೀಲ ಗೌರವ್ ಬನ್ಸಾಲ್, ಮಾರ್ಗಸೂಚಿ ರಚಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಈಗಾಗಲೇ ನಾಲ್ಕು ವಾರಗಳ ಕಾಲ ವಿಸ್ತರಣೆ ಮಾಡಿದೆ. ಹೀಗಾಗಿ ವಿಚಾರಣೆಯ ನೆಪದಲ್ಲಿ ಮಾರ್ಗಸೂಚಿ ರಚನೆ ಇನ್ನಷ್ಟು ವಿಳಂಬವಾಗಬಾರದು ಎಂದು ಹೇಳಿದ್ರು.
ಜೂನ್ 30ರಂದು ನೀಡಿದ ನಿರ್ದೇಶನದ ಅನುಸಾರ ಕೇಂದ್ರ ಸರ್ಕಾರವು ಸೆಪ್ಟೆಂಬರ್ 11ರಂದು ಕೋವಿಡ್ ಮರಣ ಪ್ರಮಾಣ ಪತ್ರ ಮಾರ್ಗಸೂಚಿ ಸಂಬಂಧ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಸೂಚನೆ ನೀಡಿದೆ.