ಕೋವಿಡ್-19 ಸೋಂಕಿನ ಮೂರನೇ ಅಲೆ ದೇಶದಲ್ಲಿ ತೀವ್ರವಾಗಿರುವ ಹಿನ್ನೆಲೆಯಲ್ಲಿ, ಸೋಂಕಿತರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡುವ ನೀತಿಯಲ್ಲಿ ಪರಿಷ್ಕರಣೆ ಮಾಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಒಮಿಕ್ರಾನ್ ಪೀಡಿತ ಕೋವಿಡ್-19 ಸೋಂಕುಗಳ ಏರಿಕೆಯಿಂದಾಗಿ, ಲಘು ಹಾಗೂ ಅಲ್ಪ ಎಂಬ ವರ್ಗಗಳಲ್ಲಿ ಸೋಂಕಿನ ಪ್ರಭಾವವನ್ನು ಆಧರಿಸಿ ಸೋಂಕಿತರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡುವ ಸಂಬಂಧ ನೀತಿಯಲ್ಲಿ ಮಾರ್ಪಾಡು ಮಾಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.
COVID-19 ಅಂಟಿಸಿಕೊಳ್ಳಿ, ಬಹುಮಾನ ಗೆಲ್ಲಿ….! ಅಮೆರಿಕಾದಲ್ಲಿ ಹೀಗೊಂದು ವಿಚಿತ್ರ ಪಾರ್ಟಿ
ಹೊಸ ನೀತಿಯ ಅನುಸಾರ, ’ಲಘು ಪ್ರಕರಣಗಳಲ್ಲಿ’ ಪಾಸಿಟಿವ್ ಎಂದು ಪರೀಕ್ಷೆಯಲ್ಲಿ ಕಂಡು ಬಂದ ಕನಿಷ್ಠ 7 ದಿನಗಳು ಮತ್ತು ಮೂರು ದಿನಗಳ ಮಟ್ಟಿಗೆ ತುರ್ತುರಹಿತ ಸ್ಥಿತಿಯಲ್ಲಿದ್ದು, ಬಿಡುಗಡೆಗೂ ಮುನ್ನ ಪರೀಕ್ಷೆಯ ಅಗತ್ಯವಿಲ್ಲ ಎಂದು ಖಾತ್ರಿ ಪಡಿಸಬೇಕಾಗುತ್ತದೆ.
’ಅಲ್ಪ ತೀವ್ರತೆ’ಯ ಪ್ರಕರಣದಲ್ಲಿ, ರೋಗ ಲಕ್ಷಣಗಳು ವಾಸಿಯಾಗಿ ಆಮ್ಲಜನಕದ ಸಂತೃಪ್ತತೆಯು ಕನಿಷ್ಠ ಮೂರು ದಿನಗಳ ಮಟ್ಟಿಗೆ ನಿರಂತರವಾಗಿ 93 ಪ್ರತಿಶತ ಇದ್ದಲ್ಲಿ ಸೋಂಕಿತರನ್ನು ಬಿಡುಗಡೆ ಮಾಡಬಹುದಾಗಿದೆ.
ದೇಶದ 28 ರಾಜ್ಯಗಳಲ್ಲಿ ಸದ್ಯದ ಮಟ್ಟಿಗೆ ಒಮಿಕ್ರಾನ್ ರೂಪಾಂತರಿಯ ಸೋಂಕುಗಳು ದಾಖಲಾಗಿವೆ. ಸದ್ಯದ ಮಟ್ಟಿಗೆ ಒಮಿಕ್ರಾನ್ ಪೀಡಿತ 3,062 ಸಕ್ರಿಯ ಪ್ರಕರಣಗಳು ಇದ್ದು, 4,868 ಮಂದಿ ಒಟ್ಟಾರೆ ಈ ರೂಪಾಂತರಿಯಿಂದಾಗಿ ಕೋವಿಡ್‌ಗೆ ತುತ್ತಾಗಿದ್ದಾರೆ. 1,805 ಸೋಂಕಿತರು ಚೇತರಿಸಿಕೊಂಡಿದ್ದರೆ, ಈ ವೈರಾಣುವಿನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ.
ಪ್ರತಿನಿತ್ಯ ಸರಾಸರಿ 1.5 ಲಕ್ಷ ಕೇಸುಗಳು ದಾಖಲಾಗುತ್ತಿರುವ ಕಾರಣ ಸದ್ಯದ ಮಟ್ಟಿಗೆ ದೇಶದಲ್ಲಿ ಕೋವಿಡ್‌ನ ಸಕ್ರಿಯ ಕೇಸುಗಳು 9,55,319ರಲ್ಲಿವೆ. ಡಿಸೆಂಬರ್‌ನಲ್ಲಿ 1.1%ನಷ್ಟಿದ್ದ ಪಾಸಿಟಿವ್ ಪ್ರಕರಣಗಳ ದರದಲ್ಲಿ ಇಂದಿನ ಲೆಕ್ಕಾಚಾರದ ಪ್ರಕಾರ 11%ಗೆ ಏರಿಕೆ ಕಂಡುಬಂದಿದೆ. 19 ರಾಜ್ಯಗಳಲ್ಲಿ 10,000ಕ್ಕಿಂತ ಹೆಚ್ಚಿನ ಸಕ್ರಿಯ ಪ್ರಕರಣಗಳಿದ್ದು, 4 ರಾಜ್ಯಗಳಲ್ಲಿ 5-10 ಸಾವಿರ ಮತ್ತು 13 ರಾಜ್ಯಗಳಲ್ಲಿ 5,000ದಷ್ಟು ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.
4 ರಾಜ್ಯಗಳಲ್ಲಿ ಅಪಾಯ
ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ತೀವ್ರವಾಗಿ ಹೆಚ್ಚಿ ಕೊರೊನಾ ಸ್ಪೋಟ ಸಂಭವಿಸಿದೆ. ಈ ರಾಜ್ಯಗಳಲ್ಲಿನ 300 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ 5%ಗೂ ಹೆಚ್ಚಿದೆ. ಇದು ತೀವ್ರ ಆತಂಕದ ವಾತಾವರಣವಾಗಿದೆ.
ಈ ರಾಜ್ಯಗಳಲ್ಲಿ ಸಾಂಕ್ರಾಮಿಕದ ತೀವ್ರತೆಯ ಅಪಾಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಬುಧವಾರ ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯದರ್ಶಿ ಲವ ಅಗರ್‌ವಾಲ್ ಅವರು, ‘‘19 ರಾಜ್ಯಗಳಲ್ಲಿ10 ಸಾವಿರಕ್ಕೂ ಹೆಚ್ಚು ಸಕ್ರಿಯ ಕೊರೊನಾ ಸೋಂಕಿತರಿದ್ದಾರೆ. ಓಮಿಕ್ರಾನ್ ಸೋಂಕು ಎನ್ನುವುದು ಸಾಮಾನ್ಯ ಶೀತಬಾಧೆ ಎನ್ನುವ ಭ್ರಮೆ ಬೇಡ. ಲಸಿಕೆ ಪಡೆದು, ಮುನ್ನೆಚ್ಚರಿಕೆ ಪಾಲಿಸಿರಿʼʼ ಎಂದು ಅವರು ಜನರಿಗೆ ಕಿವಿಮಾತು ಹೇಳಿದ್ದಾರೆ.