ಒಡಿಶಾ ಗುರುವಾರ ತನ್ನ ಮೊದಲ ಮತ್ತು ದೇಶದ ಎರಡನೇ ಅಧಿಕೃತ ಓಮಿಕ್ರಾನ್-ಸಂಬಂಧಿತ ಸಾವನ್ನು ವರದಿ ಮಾಡಿದೆ. ರಾಜಸ್ಥಾನದ ಉದಯಪುರದ 72 ವರ್ಷದ ವ್ಯಕ್ತಿ, ಒಮಿಕ್ರಾನ್ ಗೆ ಭಾರತದಲ್ಲಿ ಬಲಿಯಾದ ಮೊದಲ ಸೋಂಕಿತ ಎಂದು ಕೇಂದ್ರ ಸರ್ಕಾರ ಕಳೆದ 24 ಗಂಟೆಗಳ ಮೊದಲು ದೃಢಪಡಿಸಿತ್ತು. ಈಗ ಒಡಿಶಾದಲ್ಲಿ, ದೇಶದ ಎರಡನೇ ಒಮಿಕ್ರಾನ್ ಸಂಬಂಧಿತ ಸಾವಾಗಿದೆ.
ಓಡಿಶಾದ ಬಲಂಗೀರ್ ಜಿಲ್ಲೆಯಲ್ಲಿ, ಈ ರಾಜ್ಯದ ಮೊದಲ ಒಮಿಕ್ರಾನ್ ಸಾವಾಗಿದೆ. ಮೃತರನ್ನು 55 ವರ್ಷದ ಮಹಿಳೆ ಎಂದು ಗುರುತಿಸಲಾಗಿದ್ದು, ಅವರು ಡಿಸೆಂಬರ್ 27 ರಂದು ಸಂಬಲ್ಪುರ ಜಿಲ್ಲೆಯ ಬುರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಾವನ್ನಪ್ಪಿದ್ದಾರೆ. ಅಗಲ್‌ಪುರ ಗ್ರಾಮದ ನಿವಾಸಿಯಾಗಿರುವ ಮಹಿಳೆಗೆ ಯಾವುದೇ ವಿದೇಶ ಪ್ರವಾಸದ ಇತಿಹಾಸ ಇರಲಿಲ್ಲ.
ಡಿಸೆಂಬರ್ 20ರಂದು ಮಹಿಳೆ ಪಾರ್ಶ್ವವಾಯುವಿಗೆ ಒಳಗಾಗಿದ್ದು, ಚಿಕಿತ್ಸೆಗಾಗಿ ಬಲಂಗಿರ್‌ನಲ್ಲಿರುವ ಭೀಮಾ ಭೋಯ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ, ಆಕೆಯನ್ನ ಬುರ್ಲಾದಲ್ಲಿರುವ ವಿಮ್ಸಾರ್‌ಗೆ ವರ್ಗಾಯಿಸಲಾಯ್ತು. ವಿಮ್ಸಾರ್ ಗೆ ಶಿಫ್ಟ್ ಆದಮೇಲೆ ಆಕೆಯ ಸ್ವ್ಯಾಬ್ ಮಾದರಿಗಳನ್ನು 22 ಡಿಸೆಂಬರ್ 2021 ರಂದು ಪರೀಕ್ಷೆಗೆ ಕಳುಹಿಸಿದ್ದಾರೆ. ಮರುದಿನ ಡಿಸೆಂಬರ್ 23 ರಂದು ಆಕೆಯಲ್ಲಿ ಕೋವಿಡ್ ದೃಢವಾಗಿತ್ತು. ಅದರ ನಂತರ, ಮೃತರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಯಿತು, ಈ ಪರೀಕ್ಷೆಯಲ್ಲಿ ಆಕೆಗೆ ಒಮಿಕ್ರಾನ್ ಇರುವುದು ದೃಢವಾಯಿತು ಎಂದು ಸಂಬಲ್ಪುರ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಸ್ನೇಹಲತಸಾಹು ತಿಳಿಸಿದ್ದಾರೆ.
ಈ ಸಾವಿನಿಂದ ಓಡಿಶಾ ರಾಜ್ಯದ ವೈದ್ಯಾಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದು, ಸಾವಿಗೆ ಒಮಿಕ್ರಾನ್ ಕಾರಣವಾಯ್ತ ಅಥವಾ ಹೃದಯ ಸ್ತಂಭನದಿಂದ ಸತ್ತರ ಎಂದು ಇನ್ನು ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ.