ದೇಶದಲ್ಲಿ ಮಾರ್ಚ್ 2020ರಿಂದ ಏಪ್ರಿಲ್ 2021ರ ವೇಳೆಗೆ 1.19 ಲಕ್ಷಕ್ಕೂ ಅಧಿಕ ಮಕ್ಕಳು ತಮ್ಮ ಪೋಷಕರು ಅಥವಾ ಅಜ್ಜಿ-ತಾತಂದಿರನ್ನ ಕಳೆದುಕೊಂಡಿದ್ದಾರೆ ಎಂದು ಲಾನ್ಸೆಟ್ ಮೆಡಿಕಲ್ ಜರ್ನಲ್ನಲ್ಲಿ ಪ್ರಕಟವಾಗಿದೆ.
90,751 ಮಂದಿ ಮಕ್ಕಳು ತಂದೆಯನ್ನ ಕಳೆದುಕೊಂಡಿದ್ದರೆ, 25,500 ಮಕ್ಕಳು ಕೊರೊನಾದಿಂದಾಗಿ ತಾಯಿಯನ್ನ ಕಳೆದುಕೊಂಡಿದ್ದಾರೆ. 12 ಮಕ್ಕಳು ಪೋಷಕರನ್ನಿಬ್ಬರನ್ನೂ ಕಳೆದುಕೊಂಡಿದ್ದಾರೆ ಎಂದು ಅಧ್ಯಯನವು ಹೇಳಿದೆ.
ಸಾಂಕ್ರಾಮಿಕ ರೋಗ ಆರಂಭವಾದ ಮೊದಲ 14 ತಿಂಗಳಲ್ಲಿ 21 ದೇಶಗಳ 15 ಲಕ್ಷಕ್ಕೂ ಅಧಿಕ ಮಕ್ಕಳು ತಮ್ಮ ಪ್ರಾಥಮಿಕ ಹಾಗೂ ದ್ವಿತೀಯ ಆರೈಕೆದಾರರನ್ನ ಕಳೆದುಕೊಂಡಿದ್ದಾರೆ ಎಂದು ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡ್ರಗ್ ಅಬ್ಯೂಸ್ ವರದಿಯಲ್ಲಿ ತಿಳಿಸಿದೆ. ಇಲ್ಲಿ ಪ್ರಾಥಮಿಕ ಆರೈಕೆದಾರರು ಅಂದರೆ ಪೋಷಕರು ಹಾಗೂ ದ್ವಿತೀಯ ಆರೈಕೆದಾರರು ಅಜ್ಜಿ-ತಾತ ಆಗಿದ್ದಾರೆ.
ಭಾರತವನ್ನ ಹೊರತುಪಡಿಸಿ ಪೆರು, ದಕ್ಷಿಣ ಆಫ್ರಿಕಾ, ಮೆಕ್ಸಿಕೋ, ಬ್ರೆಜಿಲ್, ಕೊಲಂಬಿಯಾ, ಇರಾನ್, ಅಮೆರಿಕ, ಅರ್ಜೆಂಟೀನಾ ಹಾಗೂ ರಷ್ಯಾದಲ್ಲಿಯೂ 1000ದಲ್ಲಿ 1 ಮಗುವು ತನ್ನ ಪೋಷಕರನ್ನ ಸೋಂಕಿನಿಂದಾಗಿ ಕಳೆದುಕೊಂಡಿದೆ ಎಂದು ವರದಿ ಹೇಳಿದೆ.
ಲ್ಯಾನ್ಸೆಟ್ ಅಧ್ಯಯನವು ನೀಡಿದ ಮಾಹಿತಿಯ ಪ್ರಕಾರ, ಪೋಷಕರನ್ನ ಕಳೆದುಕೊಂಡು ಅನಾಥವಾದ ಮಕ್ಕಳು ಬಡತನ, ನಿಂದನೆ ಹಾಗೂ ಶೋಷಣೆಯ ಪ್ರತಿಕೂಲ ಪರಿಣಾಮ ಎದುರಿಸುತ್ತಿದ್ದಾರೆ. ಇದರಿಂದಾಗಿ ಮಕ್ಕಳಲ್ಲಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಳ್ಳೋದು, ದೈಹಿಕ ಹಿಂಸೆಯನ್ನ ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.