ನವದೆಹಲಿ: ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಕಂಪನಿ ಆಸ್ಟ್ರಾಜೆನಿಕಾ ಕೋವಿಡ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ಡಿಸೆಂಬರ್ ವೇಳೆಗೆ 10 ಕೋಟಿ ಡೋಸ್ ಲಸಿಕೆ ಸಿದ್ಧಪಡಿಸುವ ಗುರಿ ಹೊಂದಲಾಗಿದೆ.
ಅಂತಿಮ ಹಂತದ ಪ್ರಯೋಗದಲ್ಲಿ ಲಸಿಕೆ ಯಶಸ್ವಿಯಾಗಿರುವುದು ಗೊತ್ತಾಗಿದೆ. ಕೊರೋನಾ ವೈರಸ್ ನಿಂದ ಪರಿಣಾಮಕಾರಿ ರಕ್ಷಣೆ ನೀಡುತ್ತದೆ ಎನ್ನುವುದು ಪ್ರಯೋಗದಲ್ಲಿ ತಿಳಿದು ಬಂದಿದ್ದು, ಅಂತಿಮ ಹಂತದ ವರದಿಗೆ ಕಾಯಲಾಗುತ್ತಿದೆ.
ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಪಾಲುದಾರಿಕೆ ಹೊಂದಿರುವ ಪುಣೆಯ ಸೇರಂ ಇನ್ಸ್ ಸ್ಟಿಟ್ಯೂಟ್ ಆಫ್ ಇಂಡಿಯಾ ಡಿಸೆಂಬರ್ ವೇಳೆಗೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ಪಡೆಯಲು ಸಜ್ಜಾಗಿದೆ. ಸಂಸ್ಥೆಯ ಮುಖ್ಯಸ್ಥ ಆದಾರ್ ಪೂನಾವಾಲಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪುಣೆ ಮೂಲದ ಸೇರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಪೂನಾವಾಲಾ, ಪ್ರಯೋಗದ ಹಂತದಲ್ಲಿ ಯಶಸ್ವಿಯಾಗಿರುವ ಕೊರೋನಾ ಲಸಿಕೆಯ 10 ಕೋಟಿ ಡೋಸ್ ಗಳನ್ನು ಡಿಸೆಂಬರ್ ವೇಳೆಗೆ ಸಿದ್ಧಪಡಿಸಲಿದ್ದು, ಲಸಿಕೆಯ ತುರ್ತು ಬಳಕೆಗಾಗಿ ಕೇಂದ್ರ ಸರ್ಕಾರಕ್ಕೆ ಅನುಮತಿ ಕೋರಲಾಗುವುದು ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಕೊರೋನಾ ವೈರಸ್ ವಿರುದ್ಧ 10 ಕೋಟಿ ಡೋಸ್ ಲಸಿಕೆ ಸಿದ್ದಪಡಿಸುವ ಕಾರ್ಯ ಭರದಿಂದ ಸಾಗಿದೆ. ಆಸ್ಟ್ರಾಜೆನಿಕಾ ಕಂಪನಿಯ 10 ಕೋಟಿ ಡೋಸ್ ಲಸಿಕೆ ಡಿಸೆಂಬರ್ ತಿಂಗಳಿಗೆ ಸಿದ್ಧವಾಗಲಿವೆ. ಪ್ರಯೋಗದ ಹಂತದಲ್ಲಿರುವ ಲಸಿಕೆ ಪರಿಣಾಮಕಾರಿಯಾಗಿದೆ ಎನ್ನುವ ಅಂತಿಮ ವರದಿ ನಿರೀಕ್ಷೆಯಲ್ಲಿದ್ದು, ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೋರಲಾಗುವುದು ಪೂನಾವಾಲಾ ತಿಳಿಸಿದ್ದಾರೆ. ಆಸ್ಟ್ರಾಜೆನಿಕಾ ಕಂಪನಿಯ ಜೊತೆಗೆ ಸೇರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ.