ಅದು 2019 ರ ಡಿಸೆಂಬರ್. ಇಡೀ ಜಗತ್ತನ್ನೇ ಕೋವಿಡ್ ಬೆಚ್ಚಿಬೀಳಿಸಿತ್ತು. ಚಳಿಗಾಲದ ಸಮಯದಲ್ಲಿ ಆರಂಭವಾದ ವೈರಸ್ ದಾಳಿ ವಿಶ್ವವನ್ನ ಇಂದಿಗೂ ಅಲುಗಾಡಿಸುತ್ತಿದೆ. ಇದೀಗ ಮತ್ತೆ ಡಿಸೆಂಬರ್ ನಲ್ಲಿ ಮತ್ತೊಂದು ಹೊಸ ಕೋವಿಡ್ ಉಪತಳಿ ವಿಶ್ವವನ್ನು ಕಾಡಲು ಮುಂದಾಗಿದೆ. ನಾಲ್ಕು ವರ್ಷದ ನಂತರ ಕೋವಿಡ್ ಮಾಯವಾಯಿತು ಎಂದುಕೊಳ್ಳುವಷ್ಟರಲ್ಲೇ JN.1 ಉಪತಳಿ ಮತ್ತೆ ಕಾಡಲು ಬಂದಿದೆ. ಪ್ರತಿ ಬಾರಿಯೂ ಡಿಸೆಂಬರ್ ಚಳಿಗಾಲದಲ್ಲೇ ಕೋವಿಡ್ ಮರುಕಳಿಸೋದೇಕೆ ?
2019 ರಡಿಸೆಂಬರ್ ಚಳಿಗಾಲದಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಜಗತ್ತಿನಾದ್ಯಂತ ಹರಡಿತು. 2020 ರ ಡಿಸೆಂಬರ್‌ನಲ್ಲಿ ಮೂರು ದೊಡ್ಡ ರೂಪಾಂತರಗಳನ್ನು ಕಂಡ ಕೋವಿಡ್ ಆಲ್ಫಾ (B.1.1.7), ಬೀಟಾ (B.1.351), ಮತ್ತು Gamma (P.1) ಎಂಬ ಉಪತಳಿಗಳೊಂದಿಗೆ ಕಾಡಿತು. ಒಂದು ವರ್ಷದ ನಂತರ ಡಿಸೆಂಬರ್ 2021 ರಲ್ಲಿ ಜೀವನ ಸರಿದಾರಿಗೆ ಬರುತ್ತಿದೆ ಎಂಬ ಹೊತ್ತಲ್ಲೇ ಓಮಿಕ್ರಾನ್ ರೂಪಾಂತರವು ಜಗತ್ತನ್ನು ಮತ್ತೆ ಹಿಂಡಿ ಹಾಕಿತು.
ಅದರ ಮುಂದಿನ ವರ್ಷ 2022 ರ ಡಿಸೆಂಬರ್‌ನಲ್ಲಿ ಹೊಸ ಪ್ರಮುಖ ರೂಪಾಂತರದ ಹೊರಹೊಮ್ಮುವಿಕೆಯಿಲ್ಲದಿದ್ದರೂ, BA.2 ಮತ್ತು BA.5 ನಂತಹ ಓಮಿಕ್ರಾನ್ ಉಪತಳಿಗಳನ್ನ ಕಾಣಲಾಯಿತು. ಇದೀಗ 2023 ರ ಡಿಸೆಂಬರ್ ನಲ್ಲಿ ಕಾಣಿಸಿಕೊಂಡಿರುವ JN.1 ಉಪತಳಿ ಮತ್ತೆ ಆತಂಕ ಹುಟ್ಟುಹಾಕಿದೆ. ವಿಶ್ವ ಆರೋಗ್ಯ ಸಂಸ್ಥೆಯು JN.1 ಸಾರ್ವಜನಿಕ ಆರೋಗ್ಯಕ್ಕೆ ಕಡಿಮೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದೆ.
ಅಷ್ಟಕ್ಕೂ ಕೋವಿಡ್ ರೂಪಾಂತರಗಳು ಡಿಸೆಂಬರ್ ನಲ್ಲೇ ಮರುಕಳಿಸಲು ಕಾರಣ ಶೀತ. ಬೇಸಿಗೆಯಿಂದ ಚಳಿಗಾಲಕ್ಕೆ ಹೋದಂತೆ, ತಾಪಮಾನವು ಕುಸಿಯುತ್ತದೆ. ಗಾಳಿಯು ಶುಷ್ಕವಾಗುವುದರಿಂದ ವೈರಸ್ ಗಳು ಶೀಘ್ರವಾಗಿ ಹರಡುತ್ತವೆ. ಚೀನಾದ ಸಿಚುವಾನ್ ಇಂಟರ್‌ನ್ಯಾಶನಲ್ ಸ್ಟಡೀಸ್ ಯೂನಿವರ್ಸಿಟಿಯ ಸಂಶೋಧಕರು ಸಹ ಇದೇ ರೀತಿಯ ಊಹೆಯನ್ನು ದೃಢಪಡಿಸಿದ್ದಾರೆ.
ಚಳಿಗಾಲದಲ್ಲಿ ವೈರಸ್ ವಿಕಸನಗೊಂಡಂತೆ, ಹೊಸ ತಳಿಗಳು ಹೊರಹೊಮ್ಮುತ್ತವೆ. ಆದರೆ ಹಿಂದಿನ ತಳಿಗಳಿಗೆ ನಮ್ಮ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಇದರರ್ಥ ಯಾವಾಗಲೂ ನಮ್ಮ ದೇಹವು ಗುರುತಿಸದಿರುವ ಹೊಸ ಪುನರಾವರ್ತಿತ ಸೋಂಕುಗಳಿಗೆ ಕಾರಣವಾಗುತ್ತದೆ. ಇದರೊಂದಿಗೆ ಚೀನಾ ಸೇರಿದಂತೆ ಉತ್ತರ ಮತ್ತು ದಕ್ಷಿಣ ಗೋಳಾರ್ಧಗಳಲ್ಲಿ ಡಿಸೆಂಬರ್ ರಜೆಯ ತಿಂಗಳಾಗಿದೆ. ಕ್ರಿಸ್ ಮಸ್ ಸೇರಿದಂತೆ ಹೊಸ ವರ್ಷಾಚರಣೆಯಂತಹ ಸಮಾರಂಭಗಳ ವೇಳೆ ಜನದಟ್ಟಣೆ ಹೆಚ್ಚಿರುತ್ತದೆ. ಹಾಗಾಗಿ ಹೆಚ್ಚು ಮಂದಿ ಒಟ್ಟಿಗೆ ಸಂಪರ್ಕಕ್ಕೆ ಬಂದಾಗ ವೈರಸ್ ಗಳು ಶೀಘ್ರವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ.