ಕೊರೊನಾ ವೈರಸ್ನಿಂದಾಗಿ ದೇಶಕ್ಕೆ ಬಂದೆರೆಗಿರುವ ಸಮಸ್ಯೆಗಳು ಒಂದೆರಡಲ್ಲ. ಕೊರೊನಾ 2ನೆ ಅಲೆಯ ವಿರುದ್ಧ ಹೋರಾಡುತ್ತಿರುವ ಭಾರತ, ನಿರ್ಗತಿಕರಿಗೆ ಉಚಿತ ಊಟ ಹಾಗೂ ಉಚಿತ ಲಸಿಕೆ ನೀಡುವ ಸಲುವಾಗಿ ಹೆಚ್ಚುವರಿ 80 ಸಾವಿರ ಕೋಟಿ ರೂಪಾಯಿಯನ್ನ ವ್ಯಯಿಸುತ್ತಿದೆ.
ನವೆಂಬರ್ ತಿಂಗಳವರೆಗೆ ಬಡ ಹಾಗೂ ಇತರೆ ಫಲಾನುಭವಿಗಳಿಗೆ ಉಚಿತ ಆಹಾರವನ್ನ ಒದಗಿಸಲು ಸರ್ಕಾರವು ಹೆಚ್ಚುವರಿ 70 ಸಾವಿರ ರೂಪಾಯಿಯನ್ನ ಮೀಸಲಿಟ್ಟಿದೆ. ಜೊತೆಯಲ್ಲಿ ಉಚಿತ ಲಸಿಕೆ ಪೂರೈಕೆಗಾಗಿ ಹೆಚ್ಚುವರಿ 10 ಸಾವಿರ ಕೋಟಿ ರೂಪಾಯಿ ಖರ್ಚನ್ನ ಭರಿಸಬೇಕಿದೆ.
ಸೋಮವಾರ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ 18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆಯನ್ನ ಉಚಿತವಾಗಿ ನೀಡಲಾಗುವುದು. ಜೂನ್ 21ರಿಂದ ಈ ಸೌಲಭ್ಯ ಜಾರಿಗೆ ಬರಲಿದೆ ಎಂದು ಘೋಷಣೆ ಮಾಡಿದ್ದರು. ಅಲ್ಲದೇ ಸಾವಿರಾರು ಮಂದಿಯನ್ನ ಬಲಿ ಪಡೆದ ಕೊರೊನಾ 2ನೆ ಅಲೆ ವಿರುದ್ಧವೂ ಕೇಂದ್ರ ಸರ್ಕಾರ ಹೋರಾಡುತ್ತಿದೆ.
ವಿಶ್ವದಲ್ಲೇ ಅತೀ ದೊಡ್ಡ ಲಸಿಕಾ ಅಭಿಯಾನ ನಡೆಸುತ್ತಿರುವ ಕೇಂದ್ರ ಸರ್ಕಾರ 23.2 ಕೋಟಿ ಡೋಸ್ ಲಸಿಕೆಗಳನ್ನ ನೀಡಿದೆ. ಜನವರಿ 16ರಿಂದ ಆರಂಭವಾದ ಲಸಿಕಾ ಅಭಿಯಾನದಲ್ಲಿ 3.4 ಪ್ರತಿಶತ ಜನರಿಗೆ ಲಸಿಕೆ ನೀಡಲಾಗಿದೆ. ಮುಂದಿನ 22 ತಿಂಗಳಲ್ಲಿ 75 ಪ್ರತಿಶತ ಜನತೆಗೆ ಲಸಿಕೆ ನೀಡುವ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ.