ಬೆಂಗಳೂರು : ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚರಿಕೆಯಾಗಿ ಸಾರ್ವಜನಿಕರು ಹೆಚ್ಚು ಜನಸಂದಣಿ ಇರುವ ಜಾಗದಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುನ್ನೆಚ್ಚರಿಕೆಯ ಕ್ರಮವಾಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್, ಔಷಧಗಳ ಲಭ್ಯತೆ, ಸಂಗ್ರಹ, ಐಸಿಯು ಮತ್ತು ಹಾಸಿಗೆ ಸಾಮರ್ಥ್ಯಗಳ ಹೆಚ್ಚಳ ಸೇರಿದಂತೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಜನತೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ನಿರಾತಂಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಬಹುದು. ಭಯ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗೃತೆ ವಹಿಸುವಂತೆ ಮನವಿ ಮಾಡಿದ್ದಾರೆ.
ಕೋವಿಡ್ ತುರ್ತು ಪರಿಸ್ಥಿತಿ ನಿಭಾಯಿಸಲು ನಮ್ಮ ಆರೋಗ್ಯ ಇಲಾಖೆಯು ಸನ್ನದ್ಧವಾಗಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಾಮರ್ಥ್ಯ, ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆಕ್ಸಿಜನ್, ಆ್ಯಂಬುಲೆನ್ಸ್ಗಳ ಲಭ್ಯತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸಲು ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ಕೋವಿಡ್ ರೂಪಾಂತರಿ ವೈರಸ್ ಕುರಿತು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆಯಿಂದಿರಬೇಕು. ವಿಶೇಷವಾಗಿ ವೃದ್ಧರು, ರೋಗಿಗಳು, ಗರ್ಭಿಣಿಯರು ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ.