ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗಿದೆ. ಕೊರೊನಾ ಲಸಿಕೆ ಪಡೆದ ಬಳಿಕ ಉಂಟಾಗುವ ಸೈಡ್ ಎಫೆಕ್ಟ್ಗಳಿಗೆ ಹೆದರಿ ಅನೇಕರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಲಸಿಕೆ ಪಡೆದ ಬಳಿಕ ಜ್ವರ, ಸುಸ್ತು, ಮೈ ಕೈ ನೋವು ಉಂಟಾಗುತ್ತದೆ ಎಂದು ಹೇಳಲಾಗ್ತಿತ್ತು. ಇದೀಗ ಈ ಪಟ್ಟಿಗೆ ಇನ್ನೊಂದು ಸೈಡ್ ಎಫೆಕ್ಟ್ ಸೇರಿದೆ. ಕೊರೊನಾ ಲಸಿಕೆ ಪಡೆದ ಅನೇಕರಲ್ಲಿ ರಕ್ತದೊತ್ತಡ ಕೂಡ ಹೆಚ್ಚಾಗಿದೆ.
ಸ್ವಿಜರ್ಲ್ಲ್ಯಾಂಡ್ನಲ್ಲಿ ವರದಿಯಾದ ಕೆಲ ಪ್ರಕರಣಗಳ ಪ್ರಕಾರ ಲಸಿಕೆ ಪಡೆದ ಅನೇಕರಲ್ಲಿ ರಕ್ತದೊತ್ತಡ ಏರಿಕೆಯಾಗಿದೆ. ಎಂಆರ್ಎನ್ಎ ಲಸಿಕೆ ಪಡೆದವರಲ್ಲಿ ಈ ಲಕ್ಷಣ ಕಾಣಿಸಿಕೊಂಡಿದೆ. ಕೇವಲ ಸ್ವಿಜರ್ಲ್ಯಾಂಡ್ನಲ್ಲಿ ಮಾತ್ರವಲ್ಲದೇ ಭಾರತದಲ್ಲೂ ಸಹ ಇಂತಹ ಅನೇಕ ಪ್ರಕರಣಗಳು ವರದಿಯಾಗಿದೆ.
ಆದರೆ ರಕ್ತದೊತ್ತಡದಲ್ಲಿ ಏರಿಕೆ ಕೊರೊನಾ ಲಸಿಕೆ ಸೈಡ್ ಎಫೆಕ್ಟ್ಗಳ ಪಟ್ಟಿಯಲ್ಲಿ ಇಲ್ಲಿಯವರೆಗೆ ಸ್ಥಾನ ಪಡೆದಿಲ್ಲ. ಲಸಿಕೆ ಪಡೆದ ಕಾರಣಕ್ಕಾಗಿಯೇ ರಕ್ತದೊತ್ತಡ ಏರಿಕೆಯಾಯ್ತಾ ಅನ್ನೋದಕ್ಕೆ ತಜ್ಞರ ಬಳಿ ಇನ್ನೂ ನಿಖರವಾದ ಉತ್ತರವಿಲ್ಲ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೂ ಸಹ ಕೊರೊನಾ ಲಸಿಕೆ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ರಕ್ತದೊತ್ತಡ ಏರಿಕೆಯಾಗೋದು ತೀರಾ ವಿರಳವಾದ ಲಕ್ಷಣವಾಗಿದ್ದು, ಇದಕ್ಕೆ ಹೆದರಿ ಲಸಿಕೆ ಹಾಕಿಸಿಕೊಳ್ಳದೇ ಇರಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.