ಲಂಡನ್: ಚೀನಾದಲ್ಲೇ ಕೊರೋನಾ ವೈರಸ್ ಸೃಷ್ಠಿಯಾಗಿರುವುದಕ್ಕೆ ಹೊಸ ಸಾಕ್ಷ್ಯ ಲಭ್ಯವಾಗಿದೆ. ಈ ಮೂಲಕ ಚೀನಾ ಬಣ್ಣ ಬಯಲಾಗಿದೆ. ವೈರಸ್ ಮೊದಲೇ ಇತ್ತು ಎನ್ನುವ ಕಟ್ಟುಕಥೆ ಹೆಣೆದಿದ್ದ ಚೀನಾ ಬಾವಲಿಗಳ ವೈರಸ್ ಸಂಗ್ರಹಿಸಿ ಕೃತಕ ಪ್ರೋಟೀನ್ ಸೇರಿಸಿ ಕೊರೋನಾಗೆ ಜನ್ಮ ನೀಡಿರುವುದು ಬ್ರಿಟನ್ ಮತ್ತು ನಾರ್ವೇ ತಜ್ಞರ ವರದಿಯಲ್ಲಿ ಗೊತ್ತಾಗಿದೆ.
ವಿಶ್ವಕ್ಕೆ ಇದು ಗೊತ್ತಾಗದಿರಲೆಂದು ಚೀನಾ ರಿವರ್ಸ್ ಎಂಜಿನಿಯರಿಂಗ್ ವೈರಸ್ ಬಳಕೆ ಮಾಡಿರುವುದು ಗೊತ್ತಾಗಿದೆ. ಸಂಶೋಧಕರು 22 ಪುಟಗಳ ವರದಿ ನೀಡಿದ್ದು, ಚೀನಾದಲ್ಲಿ ವೈರಸ್ ಸೃಷ್ಟಿಯಾಗಿರುವ ಬಗ್ಗೆ ಸಾಕ್ಷ್ಯ ಒದಗಿಸಿದ್ದಾರೆ. ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ವೈರಸ್ ಅನ್ನು ಕೃತಕವಾಗಿ ಬದಲಿಸುವ ಸಂಶೋಧನೆ ನಡೆಸಲಾಗಿದ್ದು, ಈ ಸಂಶೋಧನೆಯಲ್ಲಿ ಚೀನಾ ವಿಜ್ಞಾನಿಗಳೊಂದಿಗೆ ಅಮೆರಿಕದ ಕೆಲವು ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಕೂಡ ಭಾಗಿಯಾಗಿದ್ದರು.
ಗೇಮ್ ಆಫ್ ಫಂಕ್ಷನ್ ಎಂಬ ಯೋಜನೆಗೆ ದುರ್ಬಲವಾಗಿದ್ದ ವೈರಸ್ ಗೆ ಕೃತಕವಾಗಿ ಮಾರಕ ಅಂಶಗಳನ್ನು ಸೇರಿಸಲಾಗಿದೆ. ಅದನ್ನು ವಿಶ್ವದ ಪಿಡುಗು ವೈರಸ್ ಆಗಿ ಬದಲಾಯಿಸಲಾಗಿದೆ. ಬಳಿಕ ರಿವರ್ಸ್ ಎಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ಅದೇ ವೈರಸ್ ಬಳಸಿಕೊಂಡು ಹೊಸ ವೈರಸ್ ಸೃಷ್ಟಿಸಲಾಗಿದೆ.
ಅಮಿನೋ ಆಸಿಡ್ ಸಂಶೋಧನೆಯಿಂದ ಚೀನಾದಲ್ಲಿ ವೈರಸ್ ಸೃಷ್ಟಿಯಾಗಿರುವುದು ಪತ್ತೆಯಾಗಿದೆ. ಜೀವಿಗಳಲ್ಲಿ ಅಮಿನೋ ಆಸಿಡ್ ಒಂದರ ಪಕ್ಕ ಒಂದರಂತೆ ಮೂರು ಇರುವುದು ಅಪರೂಪ. ಆದರೆ, ಕೊರೋನಾ ವೈರಸ್ ನಲ್ಲಿ ನಾಲ್ಕು ಅಮಿನೋ ಆಸಿಡ್ ಒಟ್ಟಿಗೆ ಇವೆ. ಚೀನಾ ಗುಹೆಗಳಲ್ಲಿನ ಬಾವಲಿಯಲ್ಲಿನ ಕೊರೋನಾ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಸಿದ ಪ್ರೋಟೀನ್ ಸೇರಿಸಿ ವೈರಸ್ ಅಪಾಯಕಾರಿ ಆಗುವಂತೆ ಮಾಡಲಾಗಿದೆ. ವುಹಾನ್ ಪ್ರಯೋಗಾಲಯದಿಂದ ಅದು ಸೋರಿಕೆಯಾಗಿದೆ ಎಂದು ಬ್ರಿಟಿಷ್ ಪ್ರೊಫೆಸರ್ ಆಂಗಸ್ ಡಾಲ್ ಗೆಲಿಶ್ ಮತ್ತು ನಾರ್ವೆಯ ವಿಜ್ಞಾನಿ ಡಾ. ಬಿರ್ಗೇರ್ ಸೊರೇನ್ ಸೆನ್ ಬಹಿರಂಗಪಡಿಸಿದ್ದಾರೆ.