ಕೊರೊನಾ ಸೋಂಕಿನಲ್ಲಿ ನಿಯಂತ್ರಣ ಸಾಧಿಸಿದ್ದ ಅಮೆರಿಕದಲ್ಲಿ ಇದೀಗ ಮತ್ತೆ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಕಳೆದ ಮೂರು ವಾರಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ದುಪ್ಪಟ್ಟು ಏರಿಕೆ ಕಂಡಿದೆ. ಹೆಚ್ಚುತ್ತಿರುವ ಡೆಲ್ಟಾ ರೂಪಾಂತರ ಪ್ರಕರಣಗಳು ಹಾಗೂ ಕೊರೊನಾ ಲಸಿಕೆ ಅಭಿಯಾನವು ಮಂದಗತಿಯಲ್ಲಿ ಸಾಗುತ್ತಿರೋದು ಇದಕ್ಕೆ ಕಾರಣ ಎನ್ನಲಾಗಿದೆ.
ಜೋನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ನೀಡಿರುವ ದತ್ತಾಂಶಗಳ ಪ್ರಕಾರ ಸೋಮವಾರ ಕೊರೊನಾ ಪ್ರಕರಣಗಳ ಸಂಖ್ಯೆ ಸರಾಸರಿ 23,600ಕ್ಕೆ ಏರಿಕೆಯಾಗಿದೆ. ಜೂನ್ 23ರಂದು ಅಮೆರಿಕದಲ್ಲಿ 11,300ಹೊಸ ಪ್ರಕರಣಗಳು ದಾಖಲಾಗಿದ್ದವು.
ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿರೋದ್ರ ಹಿನ್ನೆಲೆ ಲಾಸ್ ಎಂಜಲೀಸ್ ಹಾಗೂ ಸೇಂಟ್ ಲೂಯಿಸ್ನಂತಹ ಪ್ರದೇಶಗಳಲ್ಲಿ ಆರೋಗ್ಯಾಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ ಮನವಿ ಮಾಡುತ್ತಿದ್ದಾರೆ.
ಕಳೆದ ಮೂರು ವಾರಗಳಲ್ಲಿ ಕೊರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲೂ 150 ಪ್ರತಿಶತ ಏರಿಕೆ ಕಂಡು ಬಂದಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ 65 ವರ್ಷ ಮೇಲ್ಪಟ್ಟವರನ್ನ ಮನೆಯಿಂದ ಹೊರಬಾರದಂತೆ ಮನವಿ ಮಾಡಿದ್ದಾರೆ.