ಕೊರೊನಾ ವಿರುದ್ಧ ಭಾರತದ ಹೋರಾಟ ಪರಿಣಾಮಕಾರಿಯಾಗಿದೆ. ಕೊರೊನಾ ಲಸಿಕೆ ಅಭಿಯಾನ ಚುರುಕಾಗಿ ನಡೆಯುತ್ತಿದೆ. ಈ ಮಧ್ಯೆ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಪಡೆದವರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್, ಕೋವಿಡ್-19 ವಿರುದ್ಧ ಕೋವ್ಯಾಕ್ಸಿನ್ ಹೆಚ್ಚು ಪರಿಣಾಮಕಾರಿ ಎಂದಿದೆ.
ಸರ್ಕಾರದ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಲಸಿಕೆ ಕೊರೊನಾ ವಿರುದ್ಧ ಶೇಕಡಾ 77.8ರಷ್ಟು ಪರಿಣಾಮಕಾರಿ ಎಂಬುದು ಗೊತ್ತಾಗಿದೆ. ಕೋವ್ಯಾಕ್ಸಿನ್‌ನ ಎರಡು ಡೋಸ್ ಪಡೆದ ಎರಡು ವಾರಗಳ ನಂತರ ದೇಹದಲ್ಲಿ ಬಲವಾದ ಪ್ರತಿಕಾಯ ಉತ್ಪಾದನೆಯಾಗಿದೆ ಎಂದು ವೈದ್ಯಕೀಯ ಜರ್ನಲ್ ಹೇಳಿದೆ.
ನವೆಂಬರ್ 2020 ಮತ್ತು ಮೇ 2021 ರ ನಡುವೆ 18-97 ವರ್ಷ ವಯಸ್ಸಿನ 24,419 ಜನರ ಮೇಲೆ ಪ್ರಯೋಗ ನಡೆದಿತ್ತು. ಕೋವ್ಯಾಕ್ಸಿನ್‌ನ 3ನೇ ಹಂತದ ಪ್ರಯೋಗದ ವರದಿಯನ್ನು ಲ್ಯಾನ್ಸೆಟ್ ಬಿಡುಗಡೆ ಮಾಡಿದೆ. ವರದಿ ಪ್ರಕಾರ, ಕೋವ್ಯಾಕ್ಸಿನ್, ಭಾರತದ ಸ್ಥಳೀಯ ಲಸಿಕೆ ಕೋವಿಡ್ -19 ವಿರುದ್ಧ ಸುರಕ್ಷಿತ ಮತ್ತು ಪರಿಣಾಮಕಾರಿ ಮಾತ್ರವಲ್ಲ, ಇದು ಡೆಲ್ಟಾ ರೂಪಾಂತರದ ವಿರುದ್ಧ ಶೇಕಡಾ 65.2 ರಷ್ಟು ಪರಿಣಾಮಕಾರಿ ಎಂಬುದು ಗೊತ್ತಾಗಿದೆ. ಕೊರೊನಾ ಗಂಭೀರ ಪರಿಸ್ಥಿತಿಯಲ್ಲಿ ಇದು ಶೇಕಡಾ 93.4ರಷ್ಟು ಪರಿಣಾಮ ಬೀರಲಿದೆ.
ಭಾರತದಲ್ಲಿ ತಯಾರಾದ ಕೋವ್ಯಾಕ್ಸಿನ್ ಗೆ ಡಬ್ಲ್ಯುಎಚ್ ಒ ಮೊದಲು ಅನುಮೋದನೆ ನೀಡಿರಲಿಲ್ಲ. ದೀರ್ಘ ಸಮಯದ ನಂತ್ರ ಅನುಮೋದನೆ ಸಿಕ್ಕಿದೆ. ಹಾಗಾಗಿ ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಂಡವರು ಈಗ ವಿದೇಶಿ ಪ್ರಯಾಣ ಬೆಳೆಸಬಹುದಾಗಿದೆ. 17 ದೇಶಗಳು ಇದರ ಬಳಕೆಯನ್ನು ಅನುಮೋದಿಸಿವೆ.