ನವದೆಹಲಿ: ಕೋವಿಡ್ ರೂಪಾಂತರಿ ಒಮಿಕ್ರಾನ್ ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆಯಿಂದ ನಾಮಕರಣಗೊಂಡಿದ್ದು, ಜಗತ್ತಿನಲ್ಲೆಡೆ ಆತಂಕ ಮೂಡಿಸಿದೆ. ಹೆಚ್ಚು ರೂಪಾಂತರಗೊಳ್ಳುವ ಒಮಿಕ್ರಾನ್ ವಿರುದ್ಧ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೆಸರು ಹೇಳಲು ಇಚ್ಚಿಸದ ಅಧಿಕಾರಿ ನೀಡಿರುವ ಮಾಹಿತಿಯಂತೆ, ಪ್ರಸ್ತುತ ಇರುವ ಲಸಿಕೆಗಳಿಗೆ ಹೋಲಿಸಿದರೆ ಕೋವ್ಯಾಕ್ಸಿನ್ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಕೋವ್ಯಾಕ್ಸಿನ್ ಇಡೀ ವೈರಸ್ ಆವರಿಸುತ್ತದೆ. ಹೆಚ್ಚು ರೂಪಾಂತರ ಹೊಂದಿರುವ ಹೊಸ ರೂಪಾಂತರಿಗಳ ವಿರುದ್ಧವೂ ಕೆಲಸ ಮಾಡಬಹುದು ಎಂದು ಹೇಳಲಾಗಿದೆ.
ಕೊರೋನಾ ರೂಪಾಂತರಗಳಾದ ಅಲ್ಪಾ, ಬೀಟಾ, ಗಾಮಾ ಮತ್ತು ಡೆಲ್ಟಾದಂತಹ ರೂಪಾಂತರಗಳ ವಿರುದ್ಧ ಕೋವ್ಯಾಕ್ಸಿನ್ ಪರಿಣಾಮಕಾರಿಯಾಗಿದೆ ಎಂಬುದು ತಿಳಿದು ಬಂದಿದೆ. ಇದನ್ನು ಗಮನಿಸಿದಾಗ ಹೊಸ ರೂಪಾಂತರಿ ಒಮಿಕ್ರಾನ್ ವಿರುದ್ಧವೂ ಕೋವ್ಯಾಕ್ಸಿನ್ ಪರಿಣಾಮಕಾರಿಯಾಗಲಿದೆ ಎಂಬುದನ್ನು ನಾವು ನಿರೀಕ್ಷಿಸಬಹುದು ಎಂದು ಐಸಿಎಂಆರ್ ಅಧಿಕಾರಿ ತಿಳಿಸಿದ್ದಾರೆ.
ಒಮಿಕ್ರೋನ್ ವಿರುದ್ಧ ಕೋವ್ಯಾಕ್ಸಿನ್ ರಕ್ಷಣೆ ನೀಡುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಮಾದರಿಗಳನ್ನು ಸ್ವೀಕರಿಸಿದ ಬಳಿಕ ಪುಣೆಯಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಲಸಿಕೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ವುಹಾನ್ ನಲ್ಲಿ ಪತ್ತೆಯಾದ ಕೊರೋನಾ ಮೂಲ ರೂಪಾಂತರದ ವಿರುದ್ಧ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಇತರ ರೂಪಾಂತರಗಳ ವಿರುದ್ಧವೂ ಕೆಲಸ ಮಾಡಬಹುದು ಎನ್ನುವುದನ್ನು ಕೂಡ ತೋರಿಸಿದೆ. ಹೆಚ್ಚಿನ ಸಂಶೋಧನೆ ನಡೆಸುತ್ತಿರುವುದಾಗಿ ಕಂಪನಿ ತಿಳಿಸಿದೆ.
ವೊಕಾರ್ಡ್ ಆಸ್ಪತ್ರೆಯ ಕೇದಾರ್ ತೊರಾಸ್ಕರ್ ಅವರು, ಸೈದ್ಧಾಂತಿಕವಾಗಿ ಕೋವಾಕ್ಸಿನ್ ಎಲ್ಲಾ ಪ್ರತಿಜನಕಗಳು ಮತ್ತು ಎಪಿಟೋಪ್‌ಗಳನ್ನು ಆವರಿಸುತ್ತದೆ, mRNA (ಮಾಡರ್ನಾ, ಫಿಜರ್) ಮತ್ತು ಅಡೆನೊವೆಕ್ಟರ್ ಲಸಿಕೆಗಳಂತಹ ಸ್ಪೈಕ್ ಪ್ರೊಟೀನ್‌ಗಳನ್ನು(ಸ್ಪುಟ್ನಿಕ್, ಅಸ್ಟ್ರಾಜೆನೆಕಾ) ಆವರಿಸುತ್ತದೆ. ಅದು ಒಮಿಕ್ರಾನ್ ವಿರುದ್ಧ ಉತ್ತಮ ರಕ್ಷಣೆ ನೀಡುತ್ತದೆ, ಆದರೆ, ಹೆಚ್ಚಿನ ಸಂಶೋಧನೆ ಮತ್ತು ಪರೀಕ್ಷೆಯ ಅಗತ್ಯವಿದೆ ಎನ್ನಲಾಗಿದೆ.
ಒಮಿಕ್ರಾನ್ ಸ್ಪೈಕ್ ಪ್ರೊಟೀನ್ ಪ್ರದೇಶದಲ್ಲಿ 30 ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ ಎಂದು AIIMS ಮುಖ್ಯಸ್ಥ ಡಾ ರಣದೀಪ್ ಗುಲೇರಿಯಾ ಈ ಹಿಂದೆ ಹೇಳಿದ್ದರು, ಇದು ಪ್ರತಿರಕ್ಷಣಾ ತಪ್ಪಿಸಿಕೊಳ್ಳುವ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ನೀಡುತ್ತದೆ. ಲಸಿಕೆಗಳ ಪರಿಣಾಮಕಾರಿತ್ವವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕಿದೆ.
ಸ್ಪೈಕ್ ಪ್ರೋಟೀನ್‌ನ ಉಪಸ್ಥಿತಿಯು ಆತಿಥೇಯ ಕೋಶಕ್ಕೆ ವೈರಸ್‌ನ ಪ್ರವೇಶಕ್ಕೆ ಸಹಾಯ ಮಾಡುತ್ತದೆ, ಇದು ಸೋಂಕನ್ನು ಉಂಟುಮಾಡುತ್ತದೆ. ಮಾತ್ರವಲ್ಲ, ಸೋಂಕು ಹರಡುವಂತೆ ಮಾಡುತ್ತದೆ.
ಹೆಚ್ಚಿನ ಲಸಿಕೆಗಳು ಸ್ಪೈಕ್ ಪ್ರೋಟೀನ್ ವಿರುದ್ಧ ಪ್ರತಿಕಾಯಗಳನ್ನು ರೂಪಿಸುವ ಕಾರಣ, ಸ್ಪೈಕ್ ಪ್ರೋಟೀನ್ ಪ್ರದೇಶದಲ್ಲಿನ ಅನೇಕ ರೂಪಾಂತರಗಳು COVID-19 ಲಸಿಕೆ ಪರಿಣಾಮಕಾರಿತ್ವದಲ್ಲಿ ಇಳಿಕೆಗೆ ಕಾರಣವಾಗಬಹುದು ಎಂದು ಗುಲೇರಿಯಾ ತಿಳಿಸಿದ್ದಾರೆ.