
ಕೊವಾಕ್ಸಿನ್ ಮೂರನೇ ಹಂತದ ಪ್ರಯೋಗದ ಡೇಟಾವನ್ನು ಭಾರತ್ ಬಯೋಟೆಕ್ ಶನಿವಾರ ಬಿಡುಗಡೆ ಮಾಡಿದೆ. ಕೋವಿಡ್ -19 ರೋಗಲಕ್ಷಣಗಳೊಂದಿಗೆ ತೀವ್ರತರವಾದ ಪ್ರಕರಣಗಳಲ್ಲಿ ಕೊವಾಕ್ಸಿನ್ ಶೇಕಡಾ 93.4 ರಷ್ಟು ಪರಿಣಾಮಕಾರಿ ಎಂದು ಕಂಪನಿ ಹೇಳಿದೆ.
ಭಾರತ್ ಬಯೋಟೆಕ್ ಕೊವಾಕ್ಸಿನ್ ಹಂತ -3 ಕ್ಲಿನಿಕಲ್ ಟ್ರಯಲ್‌ನ ಅಂತಿಮ ವಿಶ್ಲೇಷಣೆಯ ಡೇಟಾವನ್ನು ಬಿಡುಗಡೆ ಮಾಡಿದೆ. ಕೋವಿಡ್ -19 ರ ಡೆಲ್ಟಾ ರೂಪಾಂತರದ ವಿರುದ್ಧ ಲಸಿಕೆ ಶೇಕಡಾ 65ಕ್ಕೂ ಹೆಚ್ಚು ರಕ್ಷಣೆ ನೀಡುತ್ತದೆ ಎಂದು ಹೇಳಲಾಗಿದೆ. ಇತರ ಕೊರೊನಾ ಲಸಿಕೆಗಳಿಗಿಂತ ಕೊವಾಕ್ಸಿನ್ ಕಡಿಮೆ ಅಡ್ಡಪರಿಣಾಮ ಬೀರಲಿದೆ ಎಂದು ಕಂಪನಿ ಹೇಳಿದೆ. ಭಾರತ್ ಬಯೋಟೆಕ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
ರೋಗಲಕ್ಷಣಗಳಿಲ್ಲದ ಕೋವಿಡ್ -19 ಪ್ರಕರಣಗಳಲ್ಲಿ ಲಸಿಕೆ ಶೇಕಡಾ 63.6 ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಪನಿ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ. ಲಸಿಕೆ SARS-CoV-2 ನ ಡೆಲ್ಟಾ ರೂಪಾಂತರದ ವಿರುದ್ಧ ಶೇಕಡಾ 65.2 ರಷ್ಟು ರಕ್ಷಣೆ ನೀಡುತ್ತದೆ. ಇತರ ಲಸಿಕೆಗಳಿಗಿಂತ ಕೊವಾಕ್ಸಿನ್ ಸುರಕ್ಷಿತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಕೊವಾಕ್ಸಿನ್ ಶೇಕಡಾ 12 ರಷ್ಟು ಜನರಲ್ಲಿ ಸಾಮಾನ್ಯ ಅಡ್ಡಪರಿಣಾಮಗಳನ್ನು ಬೀರಿದೆ ಎಂದು ಕಂಪನಿ ಹೇಳಿದೆ. ಇದರಲ್ಲಿ ಗಂಭೀರ ಅಡ್ಡಪರಿಣಾಮಗಳನ್ನು ಹೊಂದಿರುವ ಪ್ರಕರಣಗಳು ಶೇಕಡಾ 0.5 ಕ್ಕಿಂತ ಕಡಿಮೆಯಿದ್ದವು. ಕಂಪನಿಯು ದೇಶಾದ್ಯಂತ 25 ವಿವಿಧ ಸ್ಥಳಗಳಲ್ಲಿ ಕೊವಾಕ್ಸಿನ್ ಮೂರನೇ ಹಂತದ ಪ್ರಯೋಗಗಳನ್ನು ನಡೆಸಿತ್ತು.