ತುಮಕೂರು: ಅಣ್ಣನ ಮಗಳ ಮೇಲೆ ಅತ್ಯಾಚಾರ ಎಸಗಿ ಬ್ಲಾಕ್ ಮೇಲ್ ಮಾಡಿದ ಪ್ರಕರಣದಲ್ಲಿ ವ್ಯಕ್ತಿಗೆ ತುಮಕೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 30 ವರ್ಷ ಜೈಲು ಶಿಕ್ಷೆ, ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
2020ರ ಅಕ್ಟೋಬರ್ 25 ರಂದು ಅತ್ಯಾಚಾರ ಪ್ರಕರಣ ನಡೆದಿತ್ತು. ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಆಕೆಯ ಬೆತ್ತಲೆ ಫೋಟೋ ತೆಗೆದು ಇಟ್ಟುಕೊಂಡಿದ್ದ. ಅತ್ಯಾಚಾರದ ವಿಷಯ ಬಾಯಿ ಬಿಟ್ಟರೆ ತಂದೆ, ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ತುಮಕೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತುಮಕೂರು ನ್ಯಾಯಾಲಯ ವಿಚಾರಣೆ ನಡೆಸಿ ಆರೋಪಿಗೆ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತೆಗೆ 6 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಲಾಗಿದೆ. ವಿಶೇಷ ಅಭಿಯೋಜಕರಾಗಿ ಕೆ.ಎಸ್. ಆಶಾ ಅವರು ವಾದ ಮಂಡಿಸಿದ್ದರು.