ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಸವಿತಾ ಕುಮಾರಿ ತೀರ್ಪು ನೀಡಿದ್ದಾರೆ.
ಚಿಂತಾಮಣಿ ತಾಲೂಕಿನ ಐಮಿರೆಡ್ಡಿಹಳ್ಳಿಯ ಕಲ್ಯಾಣ್ ಮತ್ತು ಚಿಕ್ಕಮುನಿಮಂಗಲದ ಕೆ. ಸುರೇಶ್ ಶಿಕ್ಷಗೆ ಒಳಗಾದವರು. ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್. ಸವಿತಾ ಕುಮಾರಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
2017ರಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಲು ಸಂತ್ರಸ್ತೆಯ ತಂದೆ ತಿಳಿಸಿದ್ದು, ಇದನ್ನು ದುರುಪಯೋಗಪಡಿಸಿಕೊಂಡ ಕಲ್ಯಾಣ್ ಬೈಕ್ ನಲ್ಲಿ ಅಪ್ರಾಪ್ತೆಯನ್ನು ಮನೆಗೆ ಕರೆದುಕೊಂಡು ಹೋಗುವ ಬದಲು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಜೆ.ಎನ್. ಆನಂದ್ ಕುಮಾರ್ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕರಾದ ಲಕ್ಷ್ಮೀನರಸಿಂಹಪ್ಪ ವಾದ ಮಂಡಿಸಿದ್ದರು.
2021ರ ಡಿಸೆಂಬರ್ ನಲ್ಲಿ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಕೆ. ಸುರೇಶ್ ಅತ್ಯಾಚಾರ ಎಸಗಿದ್ದು, ಸಂತ್ರಸ್ತೆ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಪೊಲೀಸ್ ಇನ್ ಸ್ಪೆಕ್ಟರ್ ವಿಶ್ವಾಸ್ ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅರುಣಾ ಅವರು ವಾದ ಮಂಡಿಸಿದ್ದರು. ಈ ಪ್ರಕರಣಗಳಲ್ಲಿ ಇಬ್ಬರಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.