ದೆಹಲಿಯ ಸಿಗ್ನೇಚರ್ ಸೇತುವೆ ಮೇಲಿಂದ ಬಿದ್ದ ಯುವತಿಯೊಬ್ಬರು ಮೃತಪಟ್ಟಿರುವ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ತಡ ಮಾಡಿದ ಪೊಲೀಸರ ಮೇಲೆ ರಾಜಧಾನಿಯ ನ್ಯಾಯಾಲಯವೊಂದು, ಯುವತಿಯ ಹೆತ್ತವರಿಗೆ ಥೆರಪಿ ಸೆಶನ್ ಒಂದನ್ನು ಹಮ್ಮಿಕೊಳ್ಳಲು ಆದೇಶ ನೀಡಿದೆ.
ಜೂನ್ 24, 2021ರಂದು ಈ ಸಂಬಂಧ ದೂರು ನೀಡಿದ್ದ ಯುವತಿಯ ತಂದೆ, ತನ್ನ ಮಗಳು ಕಾಣೆಯಾಗಿದ್ದು, ಆಯುಶ್ ಪನ್ವರ್ ಎಂಬಾತನ ಮೇಲೆ ದೂರಿದ್ದರು. ತನ್ನ ಮಗಳಿಗೆ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಪನ್ವರ್ ಮೇಲೆ ದೂರು ಕೊಟ್ಟಿದ್ದರು ಯುವತಿಯ ತಂದೆ. ಆದರೆ ಪೊಲೀಸರು ಎಫ್‌ಐಆರ್ ದಾಖಲಿಸಿರಲಿಲ್ಲ.
ಯಮುನಾ ನದಿಯಲ್ಲಿ ಯುವತಿಯ ದೇಹ ಪತ್ತೆಯಾಗಿದೆ. ಪೊಲೀಸ್ ಠಾಣೆಗೆ 15-16 ದಿನ ಅಲೆದರೂ ಎಫ್‌ಐಆರ್ ದಾಖಲಿಸಲಿಲ್ಲ ಎಂದು ಯುವತಿಯ ತಂದೆ ದೂರಿದ್ದಾರೆ.
ಸೆಪ್ಟೆಂಬರ್ 28ರಂದು ಪ್ರಕರಣ ಸಂಬಂಧ ನಡೆದ ಆಲಿಕೆ ವೇಳೆ ಆಪಾದಿತನಿಗೆ ಜಾಮೀನು ನೀಡಲು ನಿರಾಕರಿಸಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅರುಳ್ ವರ್ಮಾ, “ಮಗಳನ್ನು ಕಳೆದುಕೊಂಡ ಕುಟುಂಬದ ಅತೀವ ದುಃಖವನ್ನು ಮಾತುಗಳಲ್ಲಿ ಹೇಳಲು ಆಗುವುದಿಲ್ಲ. ಹೀಗಾಗಿ ಕೌನ್ಸೆಲಿಂಗ್ ನೀಡಿ ಕುಟುಂಬಕ್ಕೊಂದು ಥೆರಪಿ ಮಾಡುವ ಅಗತ್ಯವಿದೆ” ಎಂದಿದ್ದಾರೆ.
ಗ್ರಾಹಕರ ಗಮನಕ್ಕೆ: ಅಕ್ಟೋಬರ್ ತಿಂಗಳ ಈ ದಿನಗಳಲ್ಲಿದೆ ಬ್ಯಾಂಕ್ ರಜೆ..!
ಕರ್ತವ್ಯ ನಿರ್ವಹಣೆಯಲ್ಲಿ ಈ ಮಟ್ಟದ ಬೇಜವಾಬ್ದಾರಿ ಪ್ರದರ್ಶಿಸಿರುವ ದೆಹಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ವಿಚಾರಣೆ ಮಾಡಬೇಕಾಗುತ್ತದೆ ಎಂದ ನ್ಯಾಯಾಧೀಶರು, “ಎಫ್‌ಐಆರ್ ದಾಖಲಿಸಲು ಹೀಗೆ ತಡ ಮಾಡಿದ ಕಾರಣ ತನಿಖೆಗೆ ಅತಿ ಮುಖ್ಯವಾದ ಸಾಕ್ಷ್ಯಗಳು ಹಾಳಾಗಲು ಸಮಯ ಕೊಟ್ಟಂತಾಗುತ್ತದೆ. ಅದರಲ್ಲೂ ಘಟನೆ ನಡೆದ ದಿನಾಂಕದ ಸಿಸಿ ಟಿವಿ ಫುಟೇಜ್‌ಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಈ ವಿಚಾರ ಇನ್ನಷ್ಟು ಮಹತ್ವ ಪಡೆಯುತ್ತದೆ” ಎಂದಿದ್ದಾರೆ.
ವಿಶೇಷ ಸಿಬ್ಬಂದಿ ತನಿಖೆ ನಡೆಸುತ್ತಿದ್ದ ಕಾರಣ ಎಫ್‌ಐಆರ್ ದಾಖಲು ಮಾಡುವುದು ತಡವಾಗಿದೆ ಎಂದು ತನಿಖಾಧಿಕಾರಿ ನೀಡಿದ ಕಾರಣವನ್ನು ನ್ಯಾಯಾಲಯ ತಳ್ಳಿ ಹಾಕಿದ್ದು, ಅಧಿಕಾರಿಗಳಿಗೆ ಛೀಮಾರಿ ಹಾಕಿದೆ.