ಬೆಂಗಳೂರು: ಜೀವನ ಭೀಮಾನಗರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಮಹೇಂದ್ರ ರಾಥೋಡ್ ಲಾಕಪ್ ಡೆತ್ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಜೀವನ ಭೀಮಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ 2016 ನೇ ಮಾರ್ಚ್ 19 ರಂದು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದ ಗುಮಾನಿ ಆಸಾಮಿ ಮಹೇಂದ್ರ ರಾಥೋಡ್ ಈತನಿಗೆ ಸದರಿ ಪೊಲೀಸ್ ಠಾಣೆಯ ಅಪರಾಧ ವಿಭಾಗ ಸಿಬ್ಬಂದಿಗಳಾದ ಏಜಾಜ್ ಖಾನ್, ಕೇಶವ ಮೂರ್ತಿ, ಮೋಹನ್ ರಾಮ್ ಮತ್ತು ಸಿದ್ದಪ್ಪ ಬೊಮ್ಮನಹಳ್ಳಿ ನಿರ್ಲಕ್ಷ್ಯತೆಯಿಂದ ದೈಹಿಕವಾಗಿ ಹಲ್ಲೆ ಮಾಡಿದ್ದರ ಪರಿಣಾಮವಾಗಿ ಆತನು ಪೊಲೀಸ್ ವಶದಲ್ಲಿದ್ದಾಗ ಮೃತಪಟ್ಟಿರುವುದು ಸಿ.ಐ.ಡಿ ತನಿಖೆಯಲ್ಲಿ ದೃಢಪಟ್ಟಿರುತ್ತದೆ.
ಈ ಕುರಿತು ಆರೋಪಿಗಳ ವಿರುದ್ಧ ಸಿ.ಐ.ಡಿ. ತನಿಖಾಧಿಕಾರಿಗಳು ಜೀವನ ಭೀಮಾನಗರ ಪೊಲೀಸ್ ಠಾಣೆಯಲ್ಲಿ 2017ನೇ ಫೆಬ್ರವರಿ 13 ರಂದು ದೂರು ಸಲ್ಲಿಸಿದ್ದರು. ಈ ಪ್ರಕರಣದ ತನಿಖೆಯನ್ನು ಸಹ ಸಿ.ಐ.ಡಿಯಲ್ಲಿ ಮುಂದುವರೆಸಿ ಮೃತನ ಸಾವಿಗೆ ಕಾರಣಕರ್ತರಾದ ಆರೋಪಿಗಳ ವಿರುದ್ಧ 2019 ನೇ ಜುಲೈ 18 ರಂದು ಬೆಂಗಳೂರು ನಗರದ 1ನೇ ಎ.ಸಿ.ಎಂ.ಎಂ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, ವಿಚಾರಣೆ ಕೈಗೊಳ್ಳಲಾಗಿತ್ತು.
51ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಸಿ.ಐ.ಡಿ ವಿಶೇಷ ನ್ಯಾಯಾಲಯ) ವಿಚಾರಣೆಯನ್ನು ಕೈಗೊಂಡು ಮೃತ ಮಹೇಂದ್ರ ರಾಥೋಡ್ ಈತನ ಸಾವಿಗೆ ಕಾರಣಕರ್ತರಾದ ಜೀವನ ಭೀಮಾನಗರ ಪೊಲೀಸ್ ಠಾಣೆಯ ಏಜಾಜ್ ಖಾನ್, ಕೇಶವ ಮೂರ್ತಿ, ಮೋಹನ್ ರಾಮ್ ಮತ್ತು ಸಿದ್ದಪ್ಪ ಬೊಮ್ಮನಹಳ್ಳಿ ಅವರುಗಳಿಗೆ ದಿನಾಂಕ: 26.11.2024 ರಂದು ಕಲಂ 304 (II) ಐ.ಪಿ.ಸಿ ಅಪರಾಧಕ್ಕಾಗಿ 7 ವರ್ಷಗಳ ಶಿಕ್ಷೆ ಮತ್ತು 30,000 ರೂ. ದಂಡ ಹಾಗೂ ಕಲಂ 330 ಐ.ಪಿ.ಸಿ ಅಪರಾಧಕ್ಕಾಗಿ 5 ವರ್ಷಗಳ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ಆದೇಶಿಸಿರುತ್ತಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕೃಷ್ಣವೇಣಿ ಅವರು ಘನ ನ್ಯಾಯಾಲಯದಲ್ಲಿ ಸಮರ್ಪಕವಾಗಿ ಪ್ರತಿನಿಧಿಸಿ ಸಮರ್ಥ ವಾದ ಮಂಡಿಸಿ ಈ ಪ್ರಕರಣವು ಶಿಕ್ಷೆಯಲ್ಲಿ ಅಂತ್ಯವಾಗುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಬೆಂಗಳೂರಿನ ಅಪರಾಧ ತನಿಖಾ ಇಲಾಖೆಯ(ಸಿಐಡಿ) ಪ್ರಕಟಣೆ ತಿಳಿಸಿದೆ.