
ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾ ರಾಜಕೀಯಕ್ಕೆ ಬಳಸಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಬೆಂಗಳೂರಿನ ಸಿವಿಲ್ ಕೋರ್ಟ್ ನೋಟಿಸ್ ನೀಡಿದೆ.
ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಧ್ಯಕ್ಷ ಸ್ಥಾನದಿಂದ ಶಾಮನೂರು ಶಿವಶಂಕರಪ್ಪ ಅವರನ್ನು ತೆಗೆಯಬೇಕು, ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಖಂಡ್ರೆ ಅವರನ್ನು ಕೈಬಿಡಬೇಕು ಎಂದು ಮನವಿ ಮಾಡಲಾಗಿದೆ.
ಪುತ್ರನನ್ನು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷನಾಗಿಸಲು ಹುನ್ನಾರ ನಡೆಸಿದ್ದಾರೆ. ಇದಕ್ಕಾಗಿ ದಾವಣಗೆರೆಯಲ್ಲಿ ಡಿಸೆಂಬರ್ 23 ರಿಂದ 26ರ ವರೆಗೆ ಮಹಾಸಭೆ ಆಯೋಜಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಶಾಮನೂರು ಶಿವಶಂಕರಪ್ಪ ಪುತ್ರನ ನಾಮಕರಣ ಮಾಡದಂತೆ ನಿರ್ಬಂಧಿಸಲು ಮನವಿ ಮಾಡಲಾಗಿದೆ.
ಅಖಿಲ ಭಾರತ ವೀರಶೈವ ಮಹಾಸಭಾ ಹೆಸರು ಬದಲಿಸಲು ವಿರೋಧ ವ್ಯಕ್ತವಾಗಿದೆ. ವೀರಶೈವ -ಲಿಂಗಾಯತ ಮಹಾಸಭಾ ಎಂದು ಬದಲಿಸದಂತೆ ನಿರ್ಬಂಧಿಸಲು ಬೆಂಗಳೂರಿನ ಎಸ್.ಎನ್. ಕೆಂಪಣ್ಣ ಮತ್ತಿತರರು ಸಿವಿಲ್ ದಾವೆ ಹೂಡಿದ್ದಾರೆ. ಈ ಹಿನ್ನಲೆಯಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಈಶ್ವರ ಖಂಡ್ರೆ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ.