ತುಮಕೂರು: ಲಂಚ ಸ್ವೀಕಾರ ಪ್ರಕರಣದಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದ ಕೆಎಎಸ್ ಅಧಿಕಾರಿ ತಬಸುಮ್ ಜಹೇರಾ ಹಾಗೂ ನೌಕರ ಶಬ್ಬೀರ್ ಅಹ್ಮದ್ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ತಲಾ 4 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ದಾರೆ. ತಬಸುಮ್ ಜಹೇರಾ ಪ್ರಸ್ತುತ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾದಿನಾಧಿಕಾರಿಯಾಗಿ ಶಬ್ಬೀರ್ ಅಹ್ಮದ್ ತುಮಕೂರು ತಾಲೂಕು ಬೆಳ್ಳಾವಿ ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕುಣಿಗಲ್ ತಾಲೂಕು ಅವರಗೆರೆಯ ಜಯರಾಮ್ ಎಂಬುವರು ತಮ್ಮ ತಂದೆಗೆ ಸೇರಿದ ಜಮೀನು ಅಕ್ರಮ ಮಾರಾಟ ಮಾಡಿದ್ದು, ಮತ್ತೆ ತಮ್ಮ ತಂದೆಯ ಹೆಸರಿಗೆ ದಾಖಲೆ ವರ್ಗಾವಣೆ ಮಾಡಿಕೊಡುವಂತೆ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಉಪ ವಿಭಾಗಾಧಿಕಾರಿಯಾಗಿದ್ದ ತಬಸುಮ್ ಜಹೇರಾ ಅವರು, ಕಚೇರಿ ನೌಕರ ಶಬ್ಬೀರ್ ಅಹ್ಮದ್ ಜೊತೆ ಮಾತುಕತೆ ನಡೆಸುವಂತೆ ಸೂಚಿಸಿದ್ದರು.
ಶಬ್ಬೀರ್ 35,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರಲ್ಲಿ 20,000 ರೂ.ಗಳನ್ನು ಜಹೇರಾ, 15 ಸಾವಿರ ರೂ.ಗಳನ್ನು ಶಬ್ಬೀರ್ ಪಡೆದುಕೊಂಡಿದ್ದರು. ಆದರೂ ಕೆಲಸ ಮಾಡಿ ಕೊಟ್ಟಿರಲಿಲ್ಲ. ಮತ್ತೆ 25000 ರೂ. ಲಂಚಕ್ಕೆ ಬೇಡಿಕೆ ಇಡಲಾಗಿದ್ದು, ಜಯರಾಮ್ ಮೊಬೈಲ್ ಕರೆ ಸಂಭಾಷಣೆ ರೆಕಾರ್ಡ್ ಮಾಡಿಕೊಂಡು ಎಸಿಬಿಗೆ ದೂರು ನೀಡಿದ್ದರು.
2017ರ ಮೇ 23 ರಂದು ಎಸಿಬಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರಾದ ರಾಮಲಿಂಗೇಗೌಡ ಇಬ್ಬರಿಗೂ ತಲ 4 ವರ್ಷ ಶಿಕ್ಷೆ. 20,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಲೋಕಾಯುಕ್ತರ ಪರವಾಗಿ ಆರ್.ಪಿ. ಪ್ರಕಾಶ ಅವರು ವಾದ ಮಂಡಿಸಿದ್ದರು.