ಬೆಂಗಳೂರು: 224 ನ್ಯಾಯಾಧೀಶರ ವರ್ಗಾವಣೆ ಮಾಡಲಾಗಿದ್ದು, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಈ ಕುರಿತಂತೆ ಅಧಿಸೂಚನೆ ಹೊರಡಿಸಿದ್ದಾರೆ. ಮೇ 22 ರಿಂದ ವರ್ಗಾವಣೆ ಆದೇಶ ಅನ್ವಯವಾಗಲಿದೆ. ಹೈಕೋರ್ಟ್ ವಿವಿಧ ವಿಭಾಗಗಳ ರಿಜಿಸ್ಟ್ರಾರ್ ಹುದ್ದೆಗಳಿಗೆ ಆರು ಜನ ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡಿರುವುದು ಸೇರಿದಂತೆ 224 ನ್ಯಾಯಾಧೀಶರ ವರ್ಗಾವಣೆ ಮಾಡಲಾಗಿದೆ.
ರಾಷ್ಟ್ರೀಯ ತನಿಖಾ ದಳ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾಗಿದ್ದ ಕಸನಪ್ಪ ನಾಯ್ಕ್ ಅವರನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಈ. ಚಂದ್ರಕಲಾ ಅವರನ್ನು ಮೂಲ ಸೌಕರ್ಯ ಮತ್ತು ನಿರ್ವಹಣಾ ರಿಜಿಸ್ಟ್ರಾರ್ ಆಗಿ ನೇಮಕ ಮಾಡಲಾಗಿದೆ.
ಹಾಸನದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ. ನಾರಾಯಣ ಪ್ರಸಾದ್ ಅವರನ್ನು ನೇಮಕಾತಿ ವಿಭಾಗದ ರಿಜಿಸ್ಟ್ರಾರ್ ಆಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಬಸವರಾಜ ಚೆಂಗಟಿಯವರನ್ನು ಅಂಕಿ ಸಂಖ್ಯೆ ಮತ್ತು ಪರಿಶೀಲನಾ ರಿಜಿಸ್ಟ್ರಾರ್ ಆಗಿ ನೇಮಿಸಲಾಗಿದೆ.
ರಾಯಚೂರು ನಲ್ಲಿ ಅಂಬೇಡ್ಕರ್ ಭಾವಚಿತ್ರ ವಿವಾದದಿಂದ ಸುದ್ದಿಯಾಗಿದ್ದ ಪ್ರಸ್ತುತ ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಮೇ 31 ರಂದು ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಹೈಕೋರ್ಟ್ ನೇಮಕಾತಿ ವಿಭಾಗದ ರಿಜಿಸ್ಟ್ರಾರ್ ಮಂಜುನಾಥ್ ನಾಯಕ್ ಅವರನ್ನು ನೇಮಕ ಮಾಡಲಾಗಿದೆ.