ಶಿವಮೊಗ್ಗ: ಬದುಕಿರುವ ವ್ಯಕ್ತಿ ಮೃತಪಟ್ಟಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಆಸ್ತಿ ಬರೆಸಿಕೊಂಡಿದ್ದ ಅಪರಾಧಿಗೆ 6 ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹಿರಿಯ ಸಿಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಆದೇಶ ನೀಡಿದೆ. ತೀರ್ಥಹಳ್ಳಿ ತಾಲೂಕಿನ ಕಡಿದಾಳು ನಿವಾಸಿ ತಿಮ್ಮಪ್ಪ ಗೌಡ ಅವರ ಹೆಸರಿನಲ್ಲಿದ್ದ 5 ಎಕರೆ 36 ಗುಂಟೆ ಜಮೀನು ಅವರ ನಿಧನದ ನಂತರ ಪತ್ನಿ ಈರಮ್ಮನವರ ಹೆಸರಿಗೆ ನೋಂದಣಿಯಾಗಿತ್ತು.
ಅವರ ಪುತ್ರರು ಆಸ್ತಿ ಕಬಳಿಸುವ ದುರುದ್ದೇಶದಿಂದ ಸಹೋದರಿ ಪದ್ಮಾವತಿ ಮೃತಪಟ್ಟಿರುವುದಾಗಿ 2010 ಡಿಸೆಂಬರ್ 22ರಂದು ಸುಳ್ಳು ವಂಶವೃಕ್ಷ ಸೃಷ್ಟಿಸಿ ತಮ್ಮ ಹೆಸರಿಗೆ ಆಸ್ತಿ ನೋಂದಾಯಿಸಿಕೊಂಡಿದ್ದರು. ಈ ಮಾಹಿತಿ ತಿಳಿದು ಪದ್ಮಾವತಿ ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದು, ಪಿಎಸ್ಐ ಭರತ್ ಕುಮಾರ್ ಕ್ರಿಮಿನಲ್ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಡಿ. ವಿನು ಮತ್ತು ಪ್ರೇಮಲೀಲಾ ಅವರು ವಾದ ಮಂಡಿಸಿದ್ದರು. ವಿಚಾರಣೆ ಆಲಿಸಿದ ನ್ಯಾಯಾಲಯ ಸುಳ್ಳು ದಾಖಲೆ ಸೃಷ್ಟಿಸಿದ ಅಪರಾಧಿಗೆ 6 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.