ಕೊಲ್ಕೊತ್ತಾ: ಕೊಲ್ಕೊತ್ತಾದ ಆರ್.ಜಿ. ಕರ್ ಆಸ್ಪತ್ರೆಯ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಸಿಬಿಐಗೆ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಕೊಲ್ಕತ್ತಾ ನ್ಯಾಯಾಲಯ ಒಪ್ಪಿಗೆ ನೀಡಿದೆ.
ಸಂತ್ರಸ್ತೆಯ ಸಹೋದ್ಯೋಗಿಗಳಾಗಿರುವ ಇತರೆ ನಾಲ್ವರು ವೈದ್ಯರ ಪಾಲಿಗ್ರಾಫ್ ಪರೀಕ್ಷೆಗೂ ಕೂಡ ಕೋರ್ಟ್ ಅನುಮತಿ ನೀಡಿದೆ. ಕೃತ್ಯ ನಡೆದ ರಾತ್ರಿ ಅವರು ವೈದ್ಯೆಯೊಂದಿಗೆ ಇದ್ದರು ಎಂದು ಹೇಳಲಾಗಿದ್ದು, ಈ ನಿಟ್ಟಿನಲ್ಲಿ ಸಿಬಿಐ ತನಿಖೆ ಮುಂದುವರೆಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿನ್ಸಿಪಾಲ್ ಸೇರಿ ಸಂತ್ರಸ್ತೆಯ ಸಹೋದ್ಯೋಗಿಗಳ ಪಾಲಿಗ್ರಾಫ್ ಪರೀಕ್ಷೆಗೆ ಕೋರ್ಟ್ ಅನುಮತಿ ಕೋರಲಾಗಿತ್ತು. ಇದಕ್ಕೆ ನ್ಯಾಯಾಲಯ ಒಪ್ಪಿಗೆ ನೀಡಿದೆ. ಸಂದೀಪ್ ಘೋಷ್ ಅವರನ್ನು ವಿಚಾರಣೆಗೊಳಪಡಿಸಿದಾಗ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರ ಪ್ರತಿಕ್ರಿಯೆಗಳಲ್ಲಿ ವ್ಯತ್ಯಾಸಗಳು ಕಂಡು ಬಂದ ಹಿನ್ನೆಲೆಯಲ್ಲಿ ಸುಳ್ಳು ಪತ್ತೆ ಪರೀಕ್ಷೆಗೆ ಸಿಬಿಐ ತೀರ್ಮಾನಿಸಿ ಕೋರ್ಟ್ ಗೆ ಮನವಿ ಮಾಡಿತ್ತು.