
ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಜೋಗಮಂಡಿ ರೈಲ್ವೆ ಸೇತುವೆಯಲ್ಲಿ ಪತಿ ಮತ್ತು ಪತ್ನಿ ಫೋಟೋ ಶೂಟ್ ಮಾಡುತ್ತಿದ್ದರು. ಈ ಸಮಯದಲ್ಲಿ ರೈಲು ಬಂದಿದೆ. ಭಯಗೊಂಡ ದಂಪತಿ ಸುಮಾರು 90 ಅಡಿ ಆಳದ ಕಂದಕಕ್ಕೆ ಹಾರಿದ್ದಾರೆ.
ಹರಿಯಮಲಿ ನಿವಾಸಿ ರಾಹುಲ್ ಮೇವಾಡ ಮತ್ತು ಅವರ ಪತ್ನಿ ಜಾನ್ವಿ ಗಾಯಗೊಂಡ ದಂಪತಿ. ಇವರು ಗೋರಮ್‌ಘಾಟ್‌ಗೆ ಬಂದಿದ್ದರು. ಕಮ್ಲಿಘಾಟ್ ರೈಲು ನಿಲ್ದಾಣದಿಂದ ಮಾರ್ವಾರ್ ಪ್ಯಾಸೆಂಜರ್ ರೈಲು ಬಂದಾಗ ಅವರು ಜೋಗಮಂಡಿ ಸೇತುವೆಯ ಮೀಟರ್ ಗೇಜ್ ರೈಲು ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆದರೆ ರೈಲಿನ ವೇಗ ಕಡಿಮೆಯಾಗಿ ಸೇತುವೆಯ ಮೇಲೆ ರೈಲು ನಿಂತಿತು. ಆದರೆ ಅಷ್ಟೊತ್ತಿಗಾಗಲೇ ದಂಪತಿ ಭಯಗೊಂಡು ಸೇತುವೆಯಿಂದ ಕೆಳಗೆ ಜಿಗಿದಿದ್ದರು.
ರೈಲ್ವೆ ಸೇತುವೆ ಬಳಿ ಅವರ ಇಬ್ಬರು ಸಂಬಂಧಿಕರು ಇದ್ದರು. ಆದರೆ ಅವರು ಟ್ರ್ಯಾಕ್ ಮೇಲೆ ಇರಲಿಲ್ಲ. ರಾಹುಲ್ ಮತ್ತು ಜಾನ್ವಿ ರೈಲ್ವೇ ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಅವರು ಫೋಟೋಗಳು ಮತ್ತು ವೀಡಿಯೊಗಳನ್ನು ಕ್ಲಿಕ್ ಮಾಡುತ್ತಿದ್ದರು. ದಂಪತಿ ಸೇತುವೆಯಿಂದ ಜಿಗಿದಿರುವ ವಿಡಿಯೋ ಇದೀಗ ಹೊರಬಿದ್ದಿದೆ. ಜಾನ್ವಿ ಅವರನ್ನು ಪಾಲಿ ಆಸ್ಪತ್ರೆಗೆ ಮತ್ತು ರಾಹುಲ್ ಅವರನ್ನು ಜೋಧ್‌ಪುರ ಏಮ್ಸ್‌ಗೆ ದಾಖಲಿಸಲಾಗಿದೆ.