ತನ್ನ ವಿವಾಹಕ್ಕಾಗಿ ಭಾರತಕ್ಕೆ ಬರಲು ಟರ್ಕಿಯಲ್ಲಿರುವ ವರನಿಗೆ ಆತನ ಬಾಸ್ ರಜೆ ನಿರಾಕರಿಸಿದ ನಂತರ ಹಿಮಾಚಲ ಪ್ರದೇಶದ ಜೋಡಿಯೊಂದು ತಮ್ಮ ವಿವಾಹವನ್ನು ಆನ್‌ಲೈನ್‌ನಲ್ಲಿ ನೆರವೇರಿಸಿಕೊಂಡಿದೆ.
ಮಂಡಿಯಲ್ಲಿರುವ ವಧು ಮತ್ತು ಟರ್ಕಿಯಲ್ಲಿರುವ ವರನೊಂದಿಗೆ ವಿವಾಹ ನಿಶ್ಚಯವಾಗಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ವಧುವಿನ ಅಜ್ಜನ ಆಸೆ ಪೂರೈಸಲು ಕುಟುಂಬ ಸದಸ್ಯರು ಸೋಮವಾರ ವರ್ಚುವಲ್ ವಿವಾಹ ನೆರವೇರಿಸಿದ್ದಾರೆ.
ಬಿಲಾಸ್‌ಪುರ ಮೂಲದ ಅದ್ನಾನ್ ಮುಹಮ್ಮದ್ ತನ್ನ ಮದುವೆಗಾಗಿ ಭಾರತಕ್ಕೆ ಬರಲು ಆರಂಭದಲ್ಲಿ ಯೋಜಿಸಿದ್ದರು. ಆದರೆ ಅವರ ಬಾಸ್ ರಜೆ ನೀಡಲು ನಿರಾಕರಿಸಿದ್ದು, ಆದರೆ ವಧುವಿನ ಅಜ್ಜನ ಕೊನೆಯಾಸೆಯನ್ನು ಪೂರೈಸುವ ತುರ್ತಿದ್ದ ಕಾರಣ ಅಂತಿಮವಾಗಿ ಆನ್ ಲೈನ್ ಮೂಲಕ ವಿವಾಹ ಮಾಡಲಾಗಿದೆ.
ಭಾನುವಾರ, ಅದ್ನಾನ್ ಕುಟುಂಬ ಸದಸ್ಯರು ಬಿಲಾಸ್‌ಪುರದಿಂದ ಮಂಡಿಗೆ ಪ್ರಯಾಣ ಬೆಳೆಸಿದ್ದು, ವಿವಾಹವು ಸೋಮವಾರ ವೀಡಿಯೊ ಕರೆಯಲ್ಲಿ ನಡೆಯಿತು, ಅಲ್ಲಿ ದಂಪತಿಗಳು ಖಾಜಿಯವರ ಸಮ್ಮುಖದಲ್ಲಿ ಪ್ರತಿಜ್ಞೆ ವಿನಿಮಯ ಮಾಡಿಕೊಂಡರು.
ಮದುವೆ ಸಮಾರಂಭಗಳಲ್ಲಿ ತಂತ್ರಜ್ಞಾನವು ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ಜುಲೈನಲ್ಲಿ, ತೀವ್ರವಾದ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ವರನ ದಿಬ್ಬಣ ದಾರಿ ಮಧ್ಯೆ ಸಿಲುಕಿಕೊಂಡಾಗ ಜೋಡಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿವಾಹವಾಗಬೇಕಾಯಿತು.