
ಹೈದರಾಬಾದ್: ಅಂತರ್ಜಾತಿ ವಿವಾಹವಾಗಿದ್ದ ನವದಂಪತಿಯ ಮೇಲೆ ಹುಡುಗಿ ಮನೆಯವರು ಭೀಕರ ದಾಳಿ ನಡೆಸಿದ್ದಾರೆ. ತೆಲಂಗಾಣದ ನಲಗೊಂಡ ಜಿಲ್ಲೆ ಮಿರಿಯಾಲಗುಡ ಪಟ್ಟಣದಲ್ಲಿ ಘಟನೆ ನಡೆದಿದೆ.
24 ವರ್ಷದ ಸಂದೀಪ್ ಮತ್ತು 22 ವರ್ಷದ ಮಾಧವಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೇರೆ ಜಾತಿಯವರಾಗಿದ್ದ ಇವರು ಪ್ರೀತಿಸಿ ಮದುವೆಯಾದ ಹಿನ್ನೆಲೆಯಲ್ಲಿ ಮಾಧವಿಯ ತಂದೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.
ತನ್ನ ತಂಗಿ ಮಗನೊಂದಿಗೆ ಮಾಧವಿ ಮದುವೆ ಮಾಡಲು ಆಕೆಯ ತಂದೆ ನಿರ್ಧರಿಸಿದ್ದರು. ಆದರೆ, ಮಾಧವಿ ಮದುವೆಗೆ ಒಪ್ಪಿರಲಿಲ್ಲ. ಪ್ರಿಯಕರನೊಂದಿಗೆ 10 ದಿನಗಳ ಹಿಂದೆ ಆರ್ಯ ಸಮಾಜದಲ್ಲಿ ಮದುವೆಯಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಆಕೆಯ ತಂದೆ ಕರೆ ಮಾಡಿ ಗಿಫ್ಟ್ ಕೊಡುವುದಾಗಿ ಕರೆಸಿಕೊಂಡು ನಂತರ ಹಲ್ಲೆ ಮಾಡಿದ್ದಾರೆ.