ಬೆಂಗಳೂರು: ಪತಿ-ಪತ್ನಿ ನಡುವಿನ ಆರೋಪದಿಂದ ಮಗುವಿನ ಮನಸ್ಸಿನ ಮೇಲೆ ಎಂತಹ ನಕರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಊಹಿಸಲಾಗದು. ಹಾಗಾಗಿ ಆರೋಪ ಮಾಡುವ ಮೊದಲು ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ.
ಕೌಟುಂಬಿಕ ವ್ಯಾಜ್ಯಗಳಲ್ಲಿ ದಂಪತಿ ಒಬ್ಬರನ್ನೊಬ್ಬರು ಶಿಕ್ಷಿಸುವ ಭರದಲ್ಲಿ ಮಗುವನ್ನು ದೂರ ಮಾಡುವ ಪೋಷಕರ ಹಗೆತನದ ರೋಗ ಇತ್ತೀಚೆಗೆ ಹೆಚ್ಚಾಗುತ್ತದೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಪತಿ-ಪತ್ನಿ ವ್ಯಾಜ್ಯವೊಂದರಲ್ಲಿ ಪುತ್ರಿಯ ಮೇಲಿನ ಲೈಂಗಿಕ ದೌರ್ಜನ್ಯದ ಸುಳ್ಳು ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸಾದ್ ಅವರ ಪೀಠ ರದ್ದುಪಡಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೌಟುಂಬಿಕ ವ್ಯಾಜ್ಯಗಳಲ್ಲಿ ಸಮೀಪದ ಪೋಷಕರು ಕಾನೂನು ಪರಿಹಾರ ಪಡೆಯುವ ಭರದಲ್ಲಿ, ಎದುರಾಳಿಯನ್ನು ಸಂಕಷ್ಟಕ್ಕೀಡು ಮಾಡುವ ಹುಮ್ಮಸ್ಸಿನಲ್ಲಿ ಮಕ್ಕಳನ್ನು ಕೂಡ ವ್ಯಾಜ್ಯದ ಭಾಗವಾಗಿಸುವ ಬೆಳವಣಿಗೆ ಹೆಚ್ಚಾಗುತ್ತಿದೆ. ಇದು ಪೋಷಕರ ಹಗೆತನದ ರೋಗ ಎಂದು ಹೈಕೋರ್ಟ್ ಹೇಳಿದೆ.
ಈ ಪ್ರಕರಣದಲ್ಲಿ ದಂಪತಿ 2007ರ ಏಪ್ರಿಲ್ 26ರಂದು ಮದುವೆಯಾಗಿದ್ದು, 2008ರಲ್ಲಿ ಹೆಣ್ಣು ಮಗು ಜನಿಸಿತ್ತು. 2017ರಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿ ಕೌಟುಂಬಿಕ ವ್ಯಾಜ್ಯ ಆರಂಭವಾಗಿತ್ತು. ಹೆಣ್ಣು ಮಗುವಿನ ಸುಪರ್ದಿ ಸಂಬಂಧ ಉಂಟಾದ ಕಾನೂನು ಸಂಘರ್ಷದಲ್ಲಿ ಬಾಲಕಿಯ ತಾಯಿಯ ಮೂರನೇ ಮತ್ತು ಸದ್ಯ ಪತಿಯಾಗಿರುವವರ ವಿರುದ್ಧ ಪೋಕ್ಸೋ ಮತ್ತು ಐಪಿಸಿ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು. 38 ವರ್ಷದ ಅರ್ಜಿದಾರರ ಪತಿ ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದು ಮಾಡುವಂತೆ ಹೈಕೋರ್ಟ್ ಗೆ ಮನವಿ ಮಾಡಿದ್ದರು.