ಬೆಂಗಳೂರು: ರಾಜ್ಯ ಸರ್ಕಾರದ ಅನೇಕ ಇಲಾಖೆಗಳ ನೌಕರರ ಅಂತರ್ ಜಿಲ್ಲಾ ವರ್ಗಾವಣೆಗೆ ಇದ್ದ ಅವಕಾಶಕ್ಕೆ ಕತ್ತರಿ ಬಿದ್ದಿದೆ.
ಕೆಲವು ಇಲಾಖೆಗಳ ಸಿ ಮತ್ತು ಡಿ ದರ್ಜೆಯ ನೌಕರರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ 16(ಎ) ರದ್ದುಗೊಳಿಸಲಾಗಿದ್ದು, ಇದರಿಂದಾಗಿ ನಿವೃತ್ತಿಯೊಳಗೆ ಬಯಸಿದ ಜಿಲ್ಲೆಗೆ ಅಥವಾ ಸ್ವಂತ ಜಿಲ್ಲೆಗೆ ವರ್ಗಾವಣೆ ಪಡೆಯುವ ಅವಕಾಶದಿಂದ ವಂಚಿತರಾಗುವಂತಾಗಿದೆ.
ಅಬಕಾರಿ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ ಇಲಾಖೆಗಳಲ್ಲಿನ ಸಿಬ್ಬಂದಿಗೆ ಅಂತರ ಜಿಲ್ಲಾ ವರ್ಗಾವಣೆಗೆ ಇದ್ದ ಅವಕಾಶಕ್ಕೆ ಕತ್ತರಿ ಬಿದ್ದಿದೆ. ಪತಿ, ಪತ್ನಿ ಪ್ರಕರಣಗಳಿಗಾದರೂ ವಿಶೇಷ ವಿನಾಯಿತಿ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಅಬಕಾರಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ನೌಕರರಲ್ಲಿ ಅನೇಕ ದಂಪತಿಗಳು ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಮಟ್ಟದ ಜೇಷ್ಠತೆ ಆಧಾರದಲ್ಲಿ ಸಿಗಬೇಕಿದ್ದ ವರ್ಗಾವಣೆ 16(ಎ) ರದ್ದಾಗಿರುವುದರಿಂದ ಅಂತರ್ ಜಿಲ್ಲಾ ವರ್ಗಾವಣೆ ಅವಕಾಶ ಕೈತಪ್ಪಿ ಹೋಗಿದೆ.
ಪ್ರಭಾವ ಬಳಸಿ ಸರ್ಕಾರಿ ನೌಕರರು, ಸಿಬ್ಬಂದಿ ವರ್ಗಾವಣೆಗೆ ದುಂಬಾಲು ಬೀಳುತ್ತಾರೆ. ವರ್ಗಾವಣೆ ನೆಪದಿಂದ ಸರ್ಕಾರಿ ಕೆಲಸಗಳು ವಿಳಂಬವಾಗುತ್ತವೆ. ಇಲಾಖೆಗಳ ಅಧಿಕಾರಿಗಳ ಮೇಲೆ ವರ್ಗಾವಣೆಗೆ ಒತ್ತಡ ಹಾಕಲಾಗುತ್ತದೆ. ಈ ಕಾರಣದಿಂದಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಗಳ 16(ಎ) ರದ್ದುಗೊಳಿಸಲಾಗಿದೆ. ಅಂತರ ಜಿಲ್ಲಾ ವರ್ಗಾವಣೆಗಿದ್ದ ಅವಕಾಶಕ್ಕೆ ಬ್ರೇಕ್ ಬಿದ್ದಿದೆ.
ಸಿ ಮತ್ತು ಡಿ ದರ್ಜೆಯ ಸಿಬ್ಬಂದಿ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶವಿಲ್ಲದೇ ದಂಪತಿ ದೂರವಾಗಿಯೇ ಇರಬೇಕಾಗಿದೆ. ರಾಜ್ಯ ಸರ್ಕಾರ ಕಳೆದ ವರ್ಷ ನಾಗರೀಕ ನೇವ ಸೇವಾ ನಿಯಮಗಳ 16(ಎ) ರದ್ಧತಿ ಮಾಡಿದ ಹಿನ್ನೆಲೆಯಲ್ಲಿ ಲಕ್ಷಾಂತರ ನೌಕರರ ಪತಿ-ಪತ್ನಿಯರು ನಿವೃತ್ತಿವರೆಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದಾಗಿ ದಾಂಪತ್ಯದಲ್ಲಿ ಕಲಹ, ವಿರಸ, ವಿಚ್ಛೇದನ ಹೆಚ್ಚಾಗುತ್ತಿವೆ ಎಂದು ಹೇಳಲಾಗಿದೆ. ಈ ನಿಯಮವನ್ನು ಸಡಿಲಗೊಳಿಸಿ ಪತಿ-ಪತ್ನಿ ಪ್ರಕರಣಗಳಿಗೆ ವಿನಾಯಿತಿ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ.