ಚಿತ್ರದುರ್ಗ: ನೋಟು ಅಮಾನ್ಯೀಕರಣದ ಮೂಲಕ ಕಪ್ಪುಹಣವನ್ನು ಬಿಳಿಯಾಗಿಸಿ ಬಿಜೆಪಿ ಖಾತೆಗೆ ಜಮಾ ಮಾಡಿದ್ದು ಹೇಗೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ ಅವರು, ಈಗ ರದ್ದುಗೊಂಡಿರುವ ಚುನಾವಣಾ ಬಾಂಡ್‌ಗಳ ಯೋಜನೆ ಕುರಿತು ಮಾತನಾಡಿ ದಾಳಿಗೊಳಗಾದ ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿವೆ ಮತ್ತು ನಂತರ ಅವರ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಗಿದೆ. 100 ಕೋಟಿ ಗಳಿಸಲು ಸಾಧ್ಯವಾಗದ ಕಂಪನಿಗಳು ಬಿಜೆಪಿಗೆ(ಚುನಾವಣಾ ಬಾಂಡ್ ಯೋಜನೆಯಡಿ) 1,100 ಕೋಟಿ ದೇಣಿಗೆ ನೀಡಿದ್ದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರತಿಪಕ್ಷಗಳನ್ನು ಭ್ರಷ್ಟರೆಂದು ಕರೆಯುತ್ತಾರೆ. ಆದರೆ ವಾಸ್ತವವೆಂದರೆ ಬಿಜೆಪಿ ಭ್ರಷ್ಟ ಪಕ್ಷವಾಗಿದೆ. ಕಳೆದ 10 ವರ್ಷಗಳಲ್ಲಿ ಅದು ದೇಶವನ್ನು ದಾರಿ ತಪ್ಪಿಸಿದೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ಸಂವಿಧಾನ ಬದಲಿಸುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ನೆನಪಿಸಿಕೊಂಡ ಅವರು, ಜನರು ಎಚ್ಚರಿಕೆಯಿಂದ ಇರುವಂತೆ ಕೇಳಿಕೊಂಡರು. ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುವವರನ್ನು ನೀವು ಎಚ್ಚರಿಕೆಯಿಂದ ಆಲಿಸಬೇಕು. ಏಕೆಂದರೆ ಅದು ನಿಮ್ಮ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ದೇಶದ ದೊಡ್ಡ ನಾಯಕ ನೈತಿಕತೆಯನ್ನು ಬಿಟ್ಟು ಜನರ ಮುಂದೆ ನಾಟಕವಾಡುತ್ತಾರೆ. ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ, ಅವರ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳುವ ಮತ್ತು ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗಟ್ಟುವ ಮೂಲಕ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.