ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳು ಕೊರೊನಾ ಎರಡನೇ ಅಲೆಗೆ ತತ್ತರಿಸಿ ಹೋಗಿವೆ. ಕೊರೊನಾ ನಿಯಂತ್ರಣಕ್ಕೆ ಎಲ್ಲ ದೇಶಗಳಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಮೂರನೇ ಅಲೆ ಮಕ್ಕಳನ್ನು ಕಾಡಲಿದೆ ಎಂದು ತಜ್ಞರು ಹೇಳಿದ್ದಾರೆ. ಮಕ್ಕಳಲ್ಲಿ ಅಪಾಯ ತಪ್ಪಿಸಲು ಈಗಿನಿಂದಲೇ ತಯಾರಿ ನಡೆದಿದೆ. ಅನೇಕ ದೇಶಗಳಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ.
ಮಕ್ಕಳಿಗೆ ಲಸಿಕೆ ಹಾಕುವಲ್ಲಿ ಪಾಶ್ಚಿಮಾತ್ಯ ದೇಶಗಳು ಮುಂದಿವೆ. 12 ವರ್ಷ ವಯಸ್ಸಿನ ಮಕ್ಕಳಿಗೆ ಫಿಜರ್-ಬಯೋಟೆಕ್‌ನ ಕೊರೊನಾ ಲಸಿಕೆಯನ್ನು ತುರ್ತು ಬಳಕೆಗೆ ಯುರೋಪಿಯನ್ ಕಮಿಷನ್ ಶುಕ್ರವಾರ ಅನುಮೋದಿಸಿದೆ. ಈ ಲಸಿಕೆ ಬಳಕೆಗೆ ಈಗಾಗಲೇ ಯುಎಸ್ ಮತ್ತು ಕೆನಡಾದಲ್ಲಿ ಅನುಮತಿ ಸಿಕ್ಕಿದೆ. ಮೇ 31 ರಂದು ಇಟಲಿ ಮಕ್ಕಳಿಗೆ ಫಿಜರ್-ಬಯೋಟೆಕ್ ಲಸಿಕೆಯನ್ನು ಅನುಮೋದಿಸಿದೆ. ಇಲ್ಲಿ 12 ರಿಂದ 15 ವರ್ಷದ ಮಕ್ಕಳಿಗೆ ಈ ಲಸಿಕೆ ಸಿಗುತ್ತಿದೆ. ಜೂನ್ 7 ರಿಂದ 12 ರಿಂದ 16 ವರ್ಷದ ಮಕ್ಕಳಿಗೆ ಮೊದಲ ಡೋಸ್ ಕೊರೊನಾ ಲಸಿಕೆ ನೀಡಲು ಜರ್ಮನಿ ನಿರ್ಧರಿಸಿದೆ. ಪೋಲೆಂಡ್‌ನಲ್ಲೂ ಈ ದಿನದಿಂದ ಮಕ್ಕಳಿಗೆ ಲಸಿಕೆ ನೀಡಲಾಗುವುದು.
ಫ್ರಾನ್ಸ್ ನಲ್ಲಿ, 16 ರಿಂದ 18 ವರ್ಷದ ಮಕ್ಕಳಿಗೆ ಜೂನ್‌ನಲ್ಲಿ ಲಸಿಕೆ ಹಾಕಲಾಗುವುದು. ಸಿಂಗಾಪುರದಲ್ಲಿ ಜೂನ್ 1 ರಿಂದ 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗ್ತಿದೆ. ಮೇ 28 ರಂದು ಜಪಾನ್ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಹಾಕಲು ಶುರು ಮಾಡಿದೆ. ಇಲ್ಲಿ ಮಕ್ಕಳಿಗೆ ಫಿಜರ್ ಲಸಿಕೆ ನೀಡಲಾಗ್ತಿದೆ. ಯುಎಸ್ ರಾಜ್ಯಗಳಲ್ಲಿ ಹದಿಹರೆಯದವರಿಗೆ ಮೇ ಮಧ್ಯದಲ್ಲಿ ಲಸಿಕೆ ಅಭಿಯಾನ ಪ್ರಾರಂಭವಾಯಿತು. 16 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರಿಗೆ ಇಸ್ರೇಲ್‌ನಲ್ಲಿ ಜನವರಿಯಿಂದ ಲಸಿಕೆ ನೀಡಲಾಗಿದೆ. ಈಗ 12 ರಿಂದ 15 ವರ್ಷದ ಮಕ್ಕಳಿಗೆ ಇಲ್ಲಿ ಲಸಿಕೆ ನೀಡಲಾಗ್ತಿದೆ. ಸ್ವಿಟ್ಜರ್ಲೆಂಡ್ ನಲ್ಲಿ 12 ರಿಂದ 15 ವರ್ಷದೊಳಗಿನ ಮಕ್ಕಳು ಫಿಜರ್ ಲಸಿಕೆ ಪಡೆಯುತ್ತಿದ್ದಾರೆ. ರೊಮೇನಿಯಾದಲ್ಲಿ ಜೂನ್ 1 ರಿಂದ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಕೊರೊನಾ ಲಸಿಕೆ ಪಡೆಯುತ್ತಿದ್ದಾರೆ.
ಭಾರತದಲ್ಲಿ, 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಇಲ್ಲಿನ ಮಕ್ಕಳಿಗೆ ಕ್ಯಾಡಿಲಾ ಮತ್ತು ಭಾರತ್ ಬಯೋಟೆಕ್ ಲಸಿಕೆಗಳಿಗೆ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ.