alex Certify ಬಯಲುಸೀಮೆ ಜೀವನಾಡಿ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬೀಳಲು ಕ್ಷಣಗಣನೆ: ಸಿಎಂ ಬಾಗಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಯಲುಸೀಮೆ ಜೀವನಾಡಿ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬೀಳಲು ಕ್ಷಣಗಣನೆ: ಸಿಎಂ ಬಾಗಿನ

ಚಿತ್ರದುರ್ಗ: ಬಯಲುಸೀಮೆಯ ಜನರ ಜೀವನಾಡಿ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬೀಳಲು ಕ್ಷಣಗಣನೆ ಪ್ರಾರಂಭವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರವೇ ಜಿಲ್ಲೆಗೆ ಆಗಮಿಸಿ ಭರ್ತಿಯಾಗಿರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್ ಅವರು ಮಂಗಳವಾರದಂದು ವಿವಿ ಸಾಗರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ವಾಣಿವಿಲಾಸ ಸಾಗರ ಜಲಾಶಯಕ್ಕೆ ನಿತ್ಯ ಭದ್ರಾದಿಂದ 693 ಕ್ಯೂಸೆಕ್ ನೀರು ಒಳಹರಿವಿದ್ದು, ಮಂಗಳವಾರದಂದು ಜಲಾಶಯದ ನೀರಿನ ಮಟ್ಟ 129.80 ಅಡಿಗೆ ತಲುಪಿದೆ. ಹೀಗಾಗಿ ನೀರಿನ ಮಟ್ಟ ಜಲಾಶಯದ ಗರಿಷ್ಟ ಮಟ್ಟ 130 ಅಡಿಗೆ ತಲುಪಿ, ಹೆಚ್ಚುವರಿ ನೀರು ಕೋಡಿ ಮೂಲಕ ಹರಿದುಹೋಗಲಿದೆ.

ಜಲಾಶಯ ಸಂಪೂರ್ಣ ಭರ್ತಿಯಾಗುತ್ತಿರುವುದು ಇಡೀ ಜಿಲ್ಲೆಗೆ ಸಂತಸದ ಕ್ಷಣವಾಗಿದ್ದು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಶೀಘ್ರವೇ ಜಿಲ್ಲೆಗೆ ಆಗಮಿಸಿ ಭರ್ತಿಯಾಗಿರುವ ವಿ.ವಿ. ಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರುಗಳು, ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಕೂಡ ಈ ಕ್ಷಣಕ್ಕೆ ಕಾತರರಾಗಿದ್ದಾರೆ.

ಬಾಗಿನ ಅರ್ಪಣೆ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿ.ಪಂ. ಸಿಇಒ ಸೋಮಶೇಖರ್ ಅವರು ಮಂಗಳವಾರದಂದು ವಿವಿ ಸಾಗರ ಜಲಾಶಯ ಪ್ರದೇಶಕ್ಕೆ ಭೇಟಿ ನೀಡಿ, ಕೋಡಿ ಬೀಳುವ ಸ್ಥಳ, ಬಾಗಿನ ಅರ್ಪಣೆಗೆ ಸೂಕ್ತ ಸ್ಥಳ ನಿಗದಿಪಡಿಸುವುದು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಆಗಮನಕ್ಕೆ ಸೂಕ್ತ ಹೆಲಿಪ್ಯಾಡ್ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಕೈಗೊಳ್ಳುವ ಸಲುವಾಗಿ ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯಪಾಲಕ ಅಭಿಯಂತರ ಬಾರಿಕರ ಚಂದ್ರಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರಯ್ಯ, ಸಹಾಯಕ ಅಭಿಯಂತರ ವೆಂಕಟೇಶ್, ತಹಸಿಲ್ದಾರ್ ರಾಜೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...