ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಗೆ ಕ್ಷಣಗಣನೆಯಾಗಿದ್ದು, ರಾಜ್ಯದೆಲ್ಲೆಡೆ ಹೋಮ ಹವನ, ಪ್ರಾರ್ಥನೆ ಜೋರಾಗಿದೆ. ಚಂದ್ರಯಾನ-3 ಯಶಸ್ವಿಯಾಗಲೆಂದು ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿಸಲಾಯಿತು. ಚಂದ್ರಯಾನ ರಾಕೇಟ್ ಭಾವಚಿತ್ರ ಹಿಡಿದು ಪೂಜೆ ಸಲ್ಲಿಸಿ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರ ಮೇಲೆ ಇಳಿಯಲೆಂದು ಪ್ರಾರ್ಥಿಸಲಾಯಿತು.
ಚಂದ್ರಯಾನ 3 ಯಶಸ್ವಿಗಾಗಿ ನಗರದ ಗವಿಗಂಗಾದರೇಶ್ವರ ದೇವಸ್ಥಾನದಲ್ಲಿ ಹೋಮ-ಹವನ ನಡೆಯುತ್ತಿದೆ. ಚಂದ್ರನ ಮೇಲೆ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ನವಗ್ರಹಗಳ ಪೂಜೆ ಹಾಗೂ ಚಂದ್ರ ಹೋಮ ನಡೆಯುತ್ತಿದೆ.ಅದೇ ರೀತಿ ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ದುರ್ಗಾ ಸಪ್ತಸತಿ ಪಾರಾಯಣ, ಚಂಡಿಕಾ ಹೋಮ ನಡೆಸಲಾಗಿದೆ.
ಭಾರತಕ್ಕೆ ಇಂದು ಅತ್ಯಂತ ಮಹತ್ವದ ದಿನ. ಭಾರತದ ಚಂದ್ರಯಾನ-3 ಬಹಳ ವಿಶೇಷ ಹಂತವನ್ನು ತಲುಪಲಿದೆ. ಆಗಸ್ಟ್ 23, 2023 ರ ಬುಧವಾರ ಸಂಜೆ 6.30 ಕ್ಕೆ ಭಾರತದ ಚಂದ್ರಯಾನ 3 ಚಂದ್ರನ ಮೇಲೆ ಇಳಿಯಲಿದೆ. ಚಂದ್ರಯಾನ-3 ಯಶಸ್ವಿಗಾಗಿ ಕೋಟ್ಯಾಂತರ ಜನ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.