ಬೆಂಗಳೂರು: ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಗ್ರಂಥಪಾಲಕರು, ದೈಹಿಕ ಶಿಕ್ಷಣ ನಿರ್ದೇಶಕರು ಸೇರಿ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿ ವರ್ಗಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ.
2022 ಸಾಲಿನಲ್ಲಿ ಶೇಕಡ 15 ರಷ್ಟು ಮಂದಿ ವರ್ಗಾವಣೆಗೆ ಅಧಿಸೂಚನೆ ಹೊರಡಿಸಿದ್ದು, ಇದರಿಂದ ಸುಮಾರು 900 ಮಂದಿಗೆ ಅವಕಾಶ ಸಿಗಲಿದೆ ಎಂದು ಹೇಳಲಾಗಿದೆ.
ಮಂಜೂರಾದ ಬೋಧಕ ಹುದ್ದೆಗಳಲ್ಲಿ ಶೇ. 9 ರಷ್ಟು, ಸಾರ್ವಜನಿಕ ಉದ್ದೇಶದಿಂದ ವಿಶೇಷ ಪ್ರಕರಣ ಕೋರಿಕೆಯಲ್ಲಿ ಶೇಕಡ 6 ರಷ್ಟು ವರ್ಗಾವಣೆಗೆ ಅವಕಾಶವಿದೆ. ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಿಯಮಗಳನ್ವಯ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗಳಲ್ಲಿ ಶೇಕಡ 15 ರಷ್ಟು ಮಂದಿ ವರ್ಗಾವಣೆಗೆ ಅವಕಾಶ ನೀಡಲಾಗಿದೆ.
ಏಪ್ರಿಲ್ 8 ವರ್ಗಾವಣೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಏಪ್ರಿಲ್ 13 ರಂದು ತಾತ್ಕಾಲಿಕ ವರ್ಗಾವಣೆ ಆದ್ಯತಾ ಪಟ್ಟಿ ಪ್ರಕಟವಾಗಲಿದೆ. ಏಪ್ರಿಲ್ 18 ಆಕ್ಷೇಪಣೆ ಸಲ್ಲಿಕೆಗೆ ಕೊನೆಯ ಕೊನೆಯ ದಿನವಾಗಿದ್ದು, ಕೌನ್ಸೆಲಿಂಗ್ ಮೂಲಕ ಭರ್ತಿ ಮಾಡಲಾಗುವ ಖಾಲಿ ಹುದ್ದೆಗಳ ಪಟ್ಟಿಯನ್ನು ಏಪ್ರಿಲ್ 21ರಂದು ಪ್ರಕಟಿಸಲಾಗುವುದು.
ಏಪ್ರಿಲ್ 23 ವಿಶೇಷ ಪ್ರಕರಣಗಳಲ್ಲಿ ಅರ್ಜಿ ಸಲ್ಲಿಸಿದವರ ವರ್ಗಾವಣೆಗೆ ಮೊದಲ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆ.
ಏಪ್ರಿಲ್ 26 ರಂದು ಎರಡನೇ ಸುತ್ತಿನ ಕೌನ್ಸೆಲಿಂಗ್ ಹಾಗೂ ಏ. 27 ರಂದು ಸಾರ್ವಜನಿಕ ಹಿತಾಸಕ್ತಿ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ.