
ಕೊರೋನಾ ಬಂದ ಬಳಿಕ ಜಿಂಜರ್ ಟೀ, ಗ್ರೀನ್ ಟೀ ಮಹತ್ವ ಬಹುತೇಕ ಎಲ್ಲರಿಗೂ ತಿಳಿದಾಗಿದೆ. ಈ ರೋಸ್ ಪೆಟಲ್ ಟೀ ಅಥವಾ ಗುಲಾಬಿ ಟೀ ಬಗ್ಗೆ ನಿಮಗೆಷ್ಟು ಗೊತ್ತು?
ಈ ಚಹಾ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲ ದೇಹ ತೂಕವನ್ನು ಕಡಿಮೆ ಮಾಡಬಹುದು. ಕೆಮ್ಮು ಮತ್ತು ಶೀತ ನಿವಾರಕ ಗುಣವಿರುವ ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.
ನಿಮ್ಮ ಮನೆಯಲ್ಲೇ ಗುಲಾಬಿ ಹೂವುಗಳಿದ್ದರೆ ಇದನ್ನು ಮಾಡುವುದು ಮತ್ತೂ ಸುಲಭ. ತಾಜಾ ಹೂವಿನ ಎಸಳುಗಳನ್ನು ನೀರಿನಲ್ಲಿ ಬೆರೆಸಿ ಚೆನ್ನಾಗಿ ಕುದಿಸಿ. ಹತ್ತು ನಿಮಿಷ ಕುದಿದ ಬಳಿಕ ಸೋಸಿ. ಸಕ್ಕರೆ ಬದಲು ಬೆಲ್ಲ ಸೇರಿಸಿ ಕುಡಿಯಿರಿ.
ಮಳಿಗೆಯಿಂದ ತಂದ ಗುಲಾಬಿಯಾದರೆ ಎಸಳನ್ನು ಸ್ವಚ್ಛವಾಗಿ ತೊಳೆಯುವುದು ಬಹಳ ಮುಖ್ಯ. ಮನೆಯಲ್ಲಿ ಹೆಚ್ಚು ಗುಲಾಬಿ ಅರಳಿದ್ದರೆ ಅದನ್ನು ಬಿಸಿಲಿನಲ್ಲಿ ಒಣಗಿಸಿ ತೆಗೆದಿಡಿ. ಬೇಕಾದಾಗ ನೀರಿಗೆ ಹಾಕಿ ಕುದಿಸಿ ತಾಜಾ ಚಹಾ ತಯಾರಿಸಬಹುದು.
ಮಕ್ಕಳಾದಿಯಾಗಿ ಎಲ್ಲರೂ ಕುಡಿಯಬಹುದಾದ ಇದರ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ನಿತ್ಯ ಇದನ್ನು ತಯಾರಿಸಿಯೂ ಕುಡಿಯಬಹುದು.