ಈ ಬಾರಿಯ ಲೋಕಸಭೆ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಎನಿಸಿಕೊಳ್ಳುವ ಸಾಧ್ಯತೆ ಇದೆ. ಅಂಕಿ-ಅಂಶಗಳ ಪ್ರಕಾರ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದುಪ್ಪಟ್ಟು ವೆಚ್ಚವಾಗಿದೆ. 2019ರಲ್ಲಿ 60 ಸಾವಿರ ಕೋಟಿ ಖರ್ಚಾಗಿದ್ದರೆ, ಈ ಬಾರಿ 1.35 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಅಮೆರಿಕದಲ್ಲಿ 2020ರ ಚುನಾವಣೆಗಳಲ್ಲಿ ಖರ್ಚು ಮಾಡಿದ್ದಕ್ಕಿಂತಲೂ ಹೆಚ್ಚು. ಅಮೆರಿಕದ ಚುನಾವಣೆಯಲ್ಲಿ 1.2 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 96.6 ಕೋಟಿ ಮತದಾರರಿದ್ದಾರೆ.
ಈ ಬಾರಿ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ಘೋಷಣೆಯೊಂದಿಗೆ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಧುಮುಕಿದ್ದರು. ಪ್ರಧಾನಿ ನರೇಂದ್ರ ಮೋದಿ, ನೀತಿ ಸಂಹಿತೆ ಜಾರಿಗೂ ಮುನ್ನವೇ ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಮ್ಯಾರಥಾನ್ ಪ್ರವಾಸ ಮಾಡುತ್ತಿದ್ದರು.
ಚುನಾವಣಾ ದಿನಾಂಕ ಘೋಷಣೆಯೊಂದಿಗೆ ದೇಶದ ದಕ್ಷಿಣ ತುದಿಯಿಂದ ಪ್ರಾರಂಭವಾದ ಅವರ ಪ್ರಚಾರ ಉತ್ತರದ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಕೊನೆಗೊಂಡಿದೆ. ಈ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಧಾನಿ ಮೋದಿ ಸಾಕಷ್ಟು ಶ್ರಮಿಸಿದ್ದಾರೆ. ಇನ್ನೊಂದೆಡೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್ ಒಟ್ಟಾಗಿ ನರೇಂದ್ರ ಮೋದಿ ಅವರನ್ನು ಎದುರಿಸಲು ಸಜ್ಜಾಗಿದ್ದಾರೆ.
ಹಾಗಾಗಿ ಚುನಾವಣಾ ಪ್ರಚಾರದಲ್ಲಿ ಸಾಕಷ್ಟು ಪೈಪೋಟಿಯಿತ್ತು. 75 ದಿನಗಳ ಅವಧಿಯಲ್ಲಿ ಪ್ರಧಾನಿ ಮೋದಿ 180 ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ಮಾಡಿದ್ದಾರೆ. ಈ ಅವಧಿಯಲ್ಲಿ 80ಕ್ಕೂ ಹೆಚ್ಚು ಮಾಧ್ಯಮ ಚಾನೆಲ್‌ಗಳು, ಪತ್ರಿಕೆಗಳು, ಯೂಟ್ಯೂಬ್ ಚಾನೆಲ್‌ಗಳು ಮತ್ತು ಆನ್‌ಲೈನ್ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಸರಾಸರಿಯಾಗಿ ಪ್ರತಿದಿನ ಮೋದಿ ಎರಡಕ್ಕೂ ಹೆಚ್ಚು ರ್ಯಾಲಿ ಮತ್ತು ರೋಡ್ ಶೋಗಳಲ್ಲಿ ಭಾಗವಹಿಸಿದ್ದಾರೆ.
ಪ್ರಧಾನಿ ಮೋದಿ ಉತ್ತರ ಪ್ರದೇಶದಲ್ಲಿ ಗರಿಷ್ಠ ಅಂದರೆ 22 ಸಾರ್ವಜನಿಕ ಸಭೆಗಳು ಮತ್ತು ಒಟ್ಟು 31 ಚುನಾವಣಾ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಕರ್ನಾಟಕದಲ್ಲಿ 11, ತೆಲಂಗಾಣದಲ್ಲಿ 11, ತಮಿಳುನಾಡಿನಲ್ಲಿ 7, ಆಂಧ್ರಪ್ರದೇಶದಲ್ಲಿ 5 ಮತ್ತು ಕೇರಳದಲ್ಲಿ 3 ರ್ಯಾಲಿಗಳನ್ನು ನಡೆಸಿದ್ದಾರೆ.
ಬಿಹಾರದಲ್ಲಿ 20 ಚುನಾವಣಾ ಕಾರ್ಯಕ್ರಮಗಳು ಮತ್ತು ಮಹಾರಾಷ್ಟ್ರದಲ್ಲಿ 19 ಚುನಾವಣಾ ಕಾರ್ಯಕ್ರಮಗಳೊಂದಿಗೆ ಪಶ್ಚಿಮ ಬಂಗಾಳದಲ್ಲಿ 20 ರ್ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ 10 ಚುನಾವಣಾ ಕಾರ್ಯಕ್ರಮಗಳನ್ನು ನಡೆಸಿದರು. ಜಾರ್ಖಂಡ್‌ನಲ್ಲೂ 7 ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. 2019ರಲ್ಲಿ ಮೋದಿ 142 ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡಿದ್ದರು.