alex Certify BIG NEWS: 26 ತಿಂಗಳಲ್ಲಿ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕಾರಿಡಾರ್ 2 ಕಾಮಗಾರಿ ಪೂರ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 26 ತಿಂಗಳಲ್ಲಿ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕಾರಿಡಾರ್ 2 ಕಾಮಗಾರಿ ಪೂರ್ಣ

ಬೆಂಗಳೂರು: ಮಹತ್ವಾಕಾಂಕ್ಷಿಯ ಬೆಂಗಳೂರು ಉಪನಗರ ರೈಲ್ವೆ ಯೋಜನೆಯಲ್ಲಿ ಚಿಕ್ಕಬಾಣಾವರ ಮತ್ತು ಬೆನ್ನಿಗಾನಹಳ್ಳಿ ನಡುವೆ ನಡೆಯುತ್ತಿರುವ ಕಾರಿಡಾರ್-2 ಕಾಮಗಾರಿಗಳನ್ನು 26 ತಿಂಗಳಲ್ಲಿ ಮುಗಿಸಲಾಗುವುದು. ಒಟ್ಟಾರೆಯಾಗಿ, ನಾಲ್ಕೂ ಕಾರಿಡಾರ್ ಗಳ ಕೆಲಸಗಳು 2026ಕ್ಕೆ ಮುಗಿಸುವ ಉದ್ದೇಶ ಇದೆ. ಸ್ವಲ್ಪ ತಡ ಅಂದರೂ 2028ರೊಳಗೆ ಸಂಪೂರ್ಣಗೊಳಿಸಲಾಗುವುದು. ಈ ಗಡುವು ಇಟ್ಟುಕೊಂಡು ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಹೇಳಿದರು.

ಶುಕ್ರವಾರ ನಗರದ ಲಿಂಗರಾಜಪುರ, ಶಾಂಪುರ, ಹೆಬ್ಬಾಳ ಮತ್ತು ಯಶವಂತಪುರಗಳಲ್ಲಿ ನಡೆಯುತ್ತಿರುವ ಉಪನಗರ ರೈಲು ಯೋಜನೆಯ ಕಾಮಗಾರಿಗಳನ್ನು ಅವರು ಪರಿಶೀಲಿಸಿದರು. ಜತೆಯಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್ ಮತ್ತು ಶಾಸಕ ಮುನಿರತ್ನ ಇದ್ದರು.

ಸ್ಥಳ ಪರಿಶೀಲನೆ ನಂತರ ಯಶವಂತಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಕಾರಿಡಾರ್ -2 ಯೋಜನೆಗೆ 157 ಎಕರೆ ಭೂಮಿಯನ್ನು ನೈರುತ್ಯ ರೈಲ್ವೆಯಿಂದ ಗುತ್ತಿಗೆಗೆ ಪಡೆದುಕೊಳ್ಳಲಾಗಿದೆ. ಮಿಕ್ಕಂತೆ ಹಳಿ ಹಾಕಲು 5.11 ಎಕರೆ ಖಾಸಗಿ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಯೋಜನೆಗೆ 7.73 ಎಕರೆ ಸರಕಾರಿ ಜಮೀನು ಬೇಕಿದ್ದು, ಇದರಲ್ಲಿ 2.72 ಎಕರೆಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.

ಒಟ್ಟಾರೆ ಈ ಕಾರಿಡಾರ್ ನಲ್ಲಿ ಇದುವರೆಗೂ‌ ಶೇ 10ರಿಂದ 15ರಷ್ಟು ಕಾಮಗಾರಿ‌ ಮುಗಿದಿದೆ. ಹತ್ತು ತಿಂಗಳಲ್ಲಿ ನೆಲಮಟ್ಟದ ಕಾಮಗಾರಿಗಳು ಪೂರ್ಣವಾಗಲಿ. ಶಾಂಪುರದಲ್ಲಿಯೂ ರೈಲ್ವೆ ಕೆಳಸೇತುವೆ ಕೆಲಸ ಮುಗಿಸಲಾಗವುದು ಎಂದು ವಿವರಿಸಿದರು.

ಮುಂದಿನ ಹಂತದಲ್ಲಿ ಹೀಳಲಿಗೆ- ರಾಜಾನುಕುಂಟೆ, ಕಾರಿಡಾರ್-3ರಲ್ಲಿ ಬೆಂಗಳೂರು – ದೇವನಹಳ್ಳಿ (ವಿಮಾನ ನಿಲ್ದಾಣ ಸಂಪರ್ಕ) ಮತ್ತು ಕಾರಿಡಾರ್-4ರಲ್ಲಿ ಕೆಂಗೇರಿ- ವೈಟ್‌ಫೀಲ್ಡ್‌ ಬೆಸೆಯಲಾಗುವುದು. ‌ಇದಲ್ಲದೆ, ಉಪನಗರ ರೈಲು ಯೋಜನೆಯನ್ನು ಚಿಕ್ಕಬಳ್ಳಾಪುರ, ಮೈಸೂರು, ಮಾಗಡಿ, ತುಮಕೂರು, ಗೌರಿಬಿದನೂರು, ಕೋಲಾರ ಮತ್ತು ಹೊಸೂರುಗಳಿಗೆ ವಿಸ್ತರಿಸುವ ಉದ್ದೇಶವಿದ್ದು, ಇದರ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಇದು ಕಾರ್ಯಗತವಾದರೆ ಯೋಜನೆಯು ಈಗಿನ 148 ಕಿ.ಮೀ.ಗಳಿಂದ 452 ಕಿ.ಮೀ.ಗಳಿಗೆ ಹಿಗ್ಗಲಿದೆ ಎಂದು ಅವರು ಮಾಹಿತಿ ನೀಡಿದರು.

ಕಾರಿಡಾರ್‍‌-2ರಲ್ಲಿ ಬರುವ 12 ನಿಲ್ದಾಣಗಳನ್ನು ಇಪಿಸಿ ಮಾದರಿಯಲ್ಲಿ ನಿರ್ಮಿಸಲಿದ್ದು, ಈ ಸಂಬಂಧ ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆ ಆ.31ರಂದು ಮುಗಿಯಲಿದೆ. ಕಾರಿಡಾರ್‍‌-4ರ ವ್ಯಾಪ್ತಿಯ ಸಿವಿಲ್ ಕಾಮಗಾರಿಗಳಿಗೆ ಕೂಡ ಟೆಂಡರ್ ಮುಗಿದಿದ್ದು, ಸದ್ಯದಲ್ಲೇ ಈ ಕಾಮಗಾರಿಗಳನ್ನು ಬಿಡ್‌ದಾರರಿಗೆ ವಹಿಸಲಾಗುವುದು. 2025ರ ಅಕ್ಟೋಬರ್‍‌ನಿಂದ ಯೋಜನೆಯ ಮೊದಲ 10 ರೈಲುಗಳ ಪೂರೈಕೆ ಕೂಡ ಆರಂಭವಾಗಲಿದೆ ಎಂದು ಅವರು ನುಡಿದರು.

ತುಂಡು‌ ಗುತ್ತಿಗೆಗೆ ಅವಕಾಶ ಇಲ್ಲ

ರೈಲ್ವೆ ‌ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡುತ್ತಿರುವ ಆರೋಪಗಳ ಬಗ್ಗೆ ಸಚಿವರು ಉತ್ತರಿಸಿ, ಅಂತಹದಕ್ಕೆ ನಿಯಮಗಳಲ್ಲಿ ಅವಕಾಶ ಇಲ್ಲ. ಒಂದು ವೇಳೆ ಗುತ್ತಿಗೆದಾರರು ಅಂತಹದ್ದು ಮಾಡಿರುವುದು ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಈ ವರ್ಷ 1,000 ಕೋಟಿ ರೂ. ಮೀಸಲು

ಉಪನಗರ ಯೋಜನೆಗೆ ಒಟ್ಟು 15,767 ಕೋಟಿ ರೂ. ವೆಚ್ಚವಾಗುತ್ತಿದೆ. 2013ರ ಬಜೆಟ್‌ನಲ್ಲಿ ಅಂದಿನ ಮತ್ತು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಎಸ್‌ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ಘೋಷಿಸಿದ್ದು, ಪ್ರಸ್ತುತ ಹಣಕಾಸು ವರ್ಷದಲ್ಲಿ 1,000 ಕೋಟಿ ರೂ. ಒದಗಿಸಿದ್ದಾರೆ. ಮಿಕ್ಕಂತೆ ಜರ್ಮನಿಯ ಕೆಎಫ್‌ಡಬ್ಲ್ಯು, ಯೂರೋಪಿಯನ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ ಮತ್ತು ಲಕ್ಸಂಬರ್ಗ್‌ನಿಂದ ಒಟ್ಟು 7,438 ಕೋಟಿ ರೂ.ಗಳನ್ನು ಸಾಲ ಪಡೆಯಲಾಗುವುದು. ಇದಕ್ಕಾಗಿ ಬರುವ ಡಿಸೆಂಬರ್‍‌ನಲ್ಲಿ ಸಹಿ ಹಾಕಲಾಗುವುದು. ಇದಾದ ನಂತರ ಕಾರಿಡಾರ್ 1 ಮತ್ತು 3ರ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುವುದು ಎಂದು ಎಂ ಬಿ ಪಾಟೀಲ ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...