ಚೀನಾ, ಜಪಾನ್, ಕೊರಿಯಾ, ಅಮೇರಿಕಾ ಮೊದಲಾದ ದೇಶಗಳಲ್ಲಿ ಕಂಡುಬಂದಿರುವ ಒಮಿಕ್ರಾನ್ ರೂಪಾಂತರಿ ತಳಿ ಬಿಎಫ್.7 ವಿದೇಶದಿಂದ ಆಗಮಿಸಿದ್ದ ಭಾರತದ ನಾಲ್ಕು ಮಂದಿಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಸೋಂಕು ದೊಡ್ಡ ಮಟ್ಟದಲ್ಲಿ ಹರಡದಂತೆ ತಡೆಯುವ ಸಲುವಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ರಾಜ್ಯ ಸರ್ಕಾರಗಳಿಗೂ ಸಹ ಈ ನಿಟ್ಟಿನಲ್ಲಿ ಕೇಂದ್ರ ಸೂಚನೆ ನೀಡಿದ್ದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮೊದಲಾದ ನಿಯಮಗಳನ್ನು ರೂಪಿಸುವಂತೆ ತಿಳಿಸಿದೆ. ತಜ್ಞರ ಪ್ರಕಾರ ಬಿಎಫ್.7 ಒಮಿಕ್ರಾನ್ ರೂಪಾಂತರಿ ತಳಿ ತಗುಲಿರುವ ಓರ್ವ ವ್ಯಕ್ತಿ 18 ಮಂದಿಗೆ ಸೋಂಕು ಹರಡಬಲ್ಲ ಎಂದು ಹೇಳಲಾಗಿದೆ.
ಆದರೆ ಭಾರತದಲ್ಲಿ ಈಗಾಗಲೇ ಬಹುತೇಕ ಮಂದಿ ಎರಡು ಡೋಸ್ ಕೊರೊನಾ ಲಸಿಕೆಗಳನ್ನು ಪಡೆದಿರುವ ಕಾರಣ ಹಾಗೂ ಇದರ ಜೊತೆಗೆ ಬೂಸ್ಟರ್ ಡೋಸ್ ಗಳನ್ನು ಸಹ ಹಲವರು ಪಡೆದಿದ್ದು, ಹೀಗಾಗಿ ಹೊಸ ರೂಪಾಂತರಿ ತಳಿ ಹೆಚ್ಚಿನ ಹಾನಿ ಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ.
ಅದಾಗ್ಯೂ ಸಹ ಸಾರ್ವಜನಿಕರು ಸರ್ಕಾರ ಜಾರಿಗೊಳಿಸುವ ಕೊರೊನಾ ಮಾರ್ಗಸೂಚಿಗಳನ್ನು ಸ್ವಯಂ ಪ್ರೇರಿತರಾಗಿ ಪಾಲಿಸುವ ಮೂಲಕ ಸೋಂಕಿನಿಂದ ತಪ್ಪಿಸಿಕೊಳ್ಳಬಹುದಾಗಿದೆ. ಅದರಲ್ಲೂ ವಯಸ್ಸಾದವರು ಹಾಗೂ ಕಾಯಿಲೆ ಹಿನ್ನೆಲೆಯುಳ್ಳವರು ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ.