ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಕೊರೊನಾ ಲಸಿಕೆ ಪಡೆದವರಲ್ಲಿ ಜ್ವರ, ಮೈಕೈನೋವು, ಲಸಿಕೆ ಪಡೆದ ಜಾಗದಲ್ಲಿ ಬಾವು, ನಿಶ್ಯಕ್ತಿ ಕಾಣಿಸಿಕೊಳ್ಳುವುದು ಸಾಮಾನ್ಯ. ಮೊದಲ ಡೋಸ್ ಗಿಂತ ಎರಡನೇ ಡೋಸ್ ಪಡೆದವರಲ್ಲಿ ಅಡ್ಡ ಪರಿಣಾಮ ಹೆಚ್ಚಾಗಿ ಕಾಣ್ತಿದೆ. ಇದಕ್ಕೆ ಕಾರಣವೇನು ಎಂಬುದನ್ನು ವಿಜ್ಞಾನಿಗಳು ಹೇಳಿದ್ದಾರೆ.
ಲಸಿಕೆಯ ಮೊದಲ ಡೋಸ್ ತೆಗೆದುಕೊಂಡ ನಂತರ ದೇಹದಲ್ಲಿ ಪ್ರತಿಕಾಯಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಲಸಿಕೆ ನಮ್ಮೊಳಗೆ ಹೋದಾಗ ನಮ್ಮ ಜೀವಕೋಶಗಳು ಅದನ್ನು ಗುರುತಿಸುತ್ತವೆ. ಎರಡನೇ ಡೋಸ್ ವಿಶೇಷ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಇಮ್ಯುನೊಲಾಜಿಕಲ್ ಮೆಮೊರಿ ಎಂದು ಕರೆಯಲಾಗುತ್ತದೆ. ಎರಡನೇ ಲಸಿಕೆ ಒಳ ಸೇರುತ್ತಿದ್ದಂತೆ, ರೋಗನಿರೋಧಕ ವ್ಯವಸ್ಥೆಯ ಮೊದಲು ದೇಹಕ್ಕೆ ನೀಡಲಾದ ಲಸಿಕೆಯನ್ನು ನೆನಪಿಸಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿಯನ್ನು ತಕ್ಷಣವೇ ಎಚ್ಚರಿಸುತ್ತದೆ. ಹೆಚ್ಚು ಪ್ರತಿಕ್ರಿಯಿಸಲು ಶುರುವಾಗುತ್ತದೆ. ಇದ್ರಿಂದಾಗಿ ಅನೇಕರಿಗೆ ಸೌಮ್ಯ ಅಡ್ಡಪರಿಣಾಮ ಕಾಣಿಸುತ್ತದೆ.
ಲಸಿಕೆ ಭಿನ್ನ ಪರಿಣಾಮ ಬೀರುತ್ತದೆ. ರೋಗನಿರೋಧಕ ಶಕ್ತಿ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಹಾರ್ಮೋನ್ ಮೇಲೂ ಇದು ಪ್ರಭಾವ ಬೀರುತ್ತದೆ. ಇದೇ ಕಾರಣಕ್ಕೆ ಪುರುಷರಿಗಿಂತ ಮಹಿಳೆಯರಲ್ಲಿ ಅಡ್ಡಪರಿಣಾಮ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೊದಲು ಕೊರೊನಾ ಸೋಂಕಿಗೆ ಒಳಗಾಗಿದ್ದವರ ಮೇಲೆ ಕೊರೊನಾ ಲಸಿಕೆ ಅಡ್ಡ ಪರಿಣಾಮ ಹೆಚ್ಚು ಎನ್ನಲಾಗಿದೆ. ಮೊದಲೇ ಅವರ ದೇಹದಲ್ಲಿ ಪ್ರತಿಕಾಯಗಳಿರುತ್ತವೆ. ಅವು ಲಸಿಕೆ ನೀಡಿದ ನಂತ್ರ ಸಕ್ರಿಯಗೊಳ್ಳುವುದ್ರಿಂದ ಅಡ್ಡಪರಿಣಾಮ ಕಾಣಿಸುತ್ತದೆ.
ಕೊರೊನಾ ಲಸಿಕೆ ನಂತ್ರ ಜ್ವರ, ಮೈಕೈ ನೋವು, ತಲೆ ನೋವು, ಲಸಿಕೆ ನೀಡಿದ ಜಾಗದಲ್ಲಿ ನೋವು, ಬಾಯಾರಿಕೆ ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವರಲ್ಲಿ ವಾಂತಿ ಕಾಣಿಸಿಕೊಳ್ಳುತ್ತದೆ. ಅಡ್ಡ ಪರಿಣಾಮ ಸಾಮಾನ್ಯವಾಗಿದ್ದರೆ ಮನೆಯಲ್ಲಿಯೇ ವಿಶ್ರಾಂತಿ ಪಡೆಯಬೇಕು. ಗಂಭೀರವಾಗಿದ್ದಲ್ಲಿ ತಕ್ಷಣ ವೈದ್ಯರ ಭೇಟಿಯಾಗಬೇಕು. ಎರಡನೇ ಡೋಸ್ ಲಸಿಕೆ ಪಡೆಯುವ ಮೊದಲೂ ಹೆಚ್ಚು ನೀರು ಸೇವನೆ ಮಾಡಬೇಕು. ಲಸಿಕೆ ಪಡೆದ ನಂತ್ರ ಒಂದೆರಡು ದಿನ ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ.