ನವದೆಹಲಿ: 2024 ರೊಳಗೆ ದೇಶದ ಎಲ್ಲಾ ಜನರಿಗೆ ಕೊರೋನಾ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಡೋಸ್ ಗೆ 1000 ರೂಪಾಯಿ ದರ ನಿಗದಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೇರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನಾವಾಲಾ ಅವರು, ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಆಸ್ಟ್ರಾಝೆನಿಕಾ ಸಹಯೋಗದಲ್ಲಿ ಕೋವಿಶೀಲ್ಡ್ ಕೋವಿಡ್ ಲಸಿಕೆ ಅಭಿವೃದ್ದಿಪಡಿಸುತ್ತಿದ್ದು, 2021 ರ ಫೆಬ್ರವರಿಯೊಳಗೆ ಆರೋಗ್ಯ ಕ್ಷೇತ್ರದ ಕಾರ್ಯಕರ್ತರು, ಸಿಬ್ಬಂದಿ ಹಾಗೂ ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.
2021 ರ ಏಪ್ರಿಲ್ ವೇಳೆಗೆ ದೇಶದ ಜನತೆಗೆ ಲಸಿಕೆ ಲಭ್ಯವಾಗಲಿದೆ. ಸಾಮಾನ್ಯ ಜನರಿಗೆ ನೀಡಲಾಗುವ ಲಸಿಕೆಯ ಪ್ರತಿ ಡೋಸ್ ಗೆ 1000 ರೂಪಾಯಿ ದರ ನಿಗದಿಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಪ್ರಯೋಗದ ಅಂತಿಮ ಪರಿಣಾಮಗಳು ಹಾಗೂ ವೈದ್ಯಕೀಯ ನಿಯಂತ್ರಣ ಪ್ರಾಧಿಕಾರದ ಸೂಚನೆಯ ಅನ್ವಯ ಕೊರೋನಾ ಲಸಿಕೆ ದರ ನಿಗದಿಪಡಿಸಲಾಗುವುದು. ದೇಶದ ಎಲ್ಲಾ ಜನತೆಗೆ ಲಸಿಕೆ ನೀಡಲು ಎರಡರಿಂದ ಮೂರು ವರ್ಷ ಬೇಕಾಗಬಹುದು. ಮೂಲಸೌಕರ್ಯ, ಸಾಗಾಣಿಕೆ, ಸಂಗ್ರಹಣೆ ಸೇರಿದಂತೆ ಹಲವು ಕಾರಣದಿಂದ ಎಲ್ಲರಿಗೂ ಲಸಿಕೆ ಸಿಗಲು ಇಷ್ಟು ಸಮಯ ಬೇಕಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.