ಚೀನಾದಲ್ಲಿ ಕೊರೊನಾ ವೈರಸ್ ಮತ್ತೊಮ್ಮೆ ಸುದ್ದಿ ಮಾಡ್ತಿದೆ. ಚೀನಾದಲ್ಲಿ ಕೊರೊನಾ ಆರ್ಭಟ ಮತ್ತೆ ಹೆಚ್ಚಾಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದ್ರೆ ಮಂಗಳವಾರ ಕೊರೊನಾ ಸೋಂಕಿತರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ 5,280 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಚೀನಾದ ಜಿಲಿನ್ ಪ್ರಾಂತ್ಯ ಕೊರೊನಾದಿಂದ ಹೆಚ್ಚು ಹಾನಿಗೊಳಗಾಗಿದೆ. ಶೆನ್‌ಜೆನ್ ಸೇರಿದಂತೆ ಕನಿಷ್ಠ 10 ನಗರಗಳಲ್ಲಿ ಕೊರೊನಾ ಅಬ್ಬರಿಸುತ್ತಿದ್ದು, ಕೊರೊನಾ ನಿಯಂತ್ರಣಕ್ಕಾಗಿ ಈ ನಗರಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.
ಈ ಪ್ರಾಂತ್ಯಗಳಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಜನರು ವಾಸವಿದ್ದಾರೆ. ಕೊರೊನಾ ಹರಡುವುದನ್ನು ತಡೆಯುವುದು ಚೀನಾ ಸರ್ಕಾರದ ಮುಖ್ಯ ಗುರಿಯಾಗಿದೆ. ಇದೇ ಕಾರಣಕ್ಕೆ ಕೊರೊನಾ ಹೆಚ್ಚಿರುವ ಪ್ರಾಂತ್ಯಗಳಲ್ಲಿ ಲಾಕ್ ಡೌನ್ ಹೇರಲಾಗಿದೆ. ಈ ಸೋಂಕಿನ ಹೆಚ್ಚಿನ ಪ್ರಕರಣಗಳು ಓಮಿಕ್ರಾನ್ BA2 ರೂಪಾಂತರದಿಂದ ಬಂದವಾಗಿದ್ದು ಇದನ್ನು ಸ್ಟೆಲ್ತ್ ಓಮಿಕ್ರಾನ್ ಎಂದೂ ಕರೆಯಲಾಗುತ್ತದೆ.
ಸ್ಟೆಲ್ತ್ ಓಮಿಕ್ರಾನ್ ರೂಪಾಂತರದಿಂದಾಗಿ ಚೀನಾದಲ್ಲಿ ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈಶಾನ್ಯ ಚೀನಾದ ಜಿಲಿನ್ ಪ್ರಾಂತ್ಯದಲ್ಲಿ ಅತಿ ಹೆಚ್ಚು 2,601 ಹೊಸ ಕೊರೊನಾ ಪ್ರಕರಣ ದಾಖಲಾಗಿದೆ.