ನವದೆಹಲಿ: ದೇಶದಲ್ಲಿ ಕೊರೋನಾ ಹೋಗಲಾಡಿಸಲು ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ.
ಆಕ್ಸ್ ಫರ್ಡ್, ಆಸ್ಟ್ರಾಜೆನಿಕಾದ ಸಹಯೋಗದಲ್ಲಿ ಪುಣೆಯ ಸಿರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿದೆ. ಹೈದರಾಬಾದ್ ನ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸುತ್ತಿದ್ದು, ಇವೆರಡು ಲಸಿಕೆಗಳನ್ನು ದೇಶದಲ್ಲಿ ನೀಡಲಾಗ್ತಿದೆ.
ಇವುಗಳಲ್ಲಿ ಕೊವ್ಯಾಕ್ಸಿನ್ ಗಿಂತ ಕೋವಿಶೀಲ್ಡ್ ಲಸಿಕೆ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ.
ಕೋವಿಶೀಲ್ಡ್ ಶೇಕಡ 98 ರಷ್ಟು ಮತ್ತು ಕೊವ್ಯಾಕ್ಸಿನ್ ಶೇಕಡ 80 ರಷ್ಟು ಪರಿಣಾಮಕಾರಿಯಾಗಿದೆ. 2 ಡೋಸ್ ಲಸಿಕೆ ಪಡೆದ ಶೇಕಡ 95 ರಷ್ಟು ಜನರಲ್ಲಿ ಆಂಟಿಬಾಡಿ ಸೃಷ್ಟಿಯಾಗಿದೆ. ಈ ಎರಡು ಲಸಿಕೆಗಳ ಪರಿಣಾಮದ ಕುರಿತು ನಡೆಸಿದ ಅಧ್ಯಯನವೊಂದರಲ್ಲಿನ ಮಾಹಿತಿ ಪ್ರಕಾರ, 2 ಡೋಸ್ ಪಡೆದ ನಂತರ ಎರಡೂ ಲಸಿಕೆಗಳಿಂದ ಉತ್ತಮವಾದ ರೋಗನಿರೋಧಕ ಶಕ್ತಿ ಬಂದಿದೆ.
ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಆಂಟಿಬಾಡಿ ಪ್ರಮಾಣ 127, ಕೊವ್ಯಾಕ್ಸಿನ್ ಪಡೆದವರಲ್ಲಿ 53 ಯೂನಿಟ್ ಇದೆ. ಕೋವಿಶೀಲ್ಡ್ ಲಸಿಕೆ ಪಡೆದ ಶೇಕಡ 5.5 ರಷ್ಟು ಮಂದಿಗೆ ಸೋಂಕು ತಗಲಿದ್ದು, ಕೊವ್ಯಾಕ್ಸಿನ್ ಲಸಿಕೆ ಪಡೆದ ಶೇಕಡ 2.2 ರಷ್ಟು ಮಂದಿಗೆ ಸೋಂಕು ತಗುಲಿದೆ.
ಈ ಅಧ್ಯಯನ ವರದಿ ಇನ್ನೂ ತಜ್ಞರಿಂದ ಪರಿಶೀಲನೆಗೆ ಒಳಪಟ್ಟಿಲ್ಲ. ಈ ಲಸಿಕೆಗಳನ್ನು ಪಡೆದುಕೊಂಡ ಆರೋಗ್ಯ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಅಧ್ಯಯನ ಕೈಗೊಳ್ಳಲಾಗಿತ್ತು. ಎರಡು ಲಸಿಕೆಗಳು ಉತ್ತಮವಾದ ರೋಗ ನಿರೋಧಕ ಶಕ್ತಿ ಹೊಂದಿದೆ ಎಂದು ವರದಿ ತಿಳಿಸಿದೆ.
ಮೆಡ್ ರಿಕ್ಟಿವ್ ವೆಬ್ ನಲ್ಲಿ ಪೂರ್ವ ಮುದ್ರಿತ ವರದಿ ಪ್ರಕಟವಾಗಿದ್ದು, ಅಧ್ಯಯನಕ್ಕೆ ಸ್ಪಂದಿಸಿದವರ ರಕ್ತದ ಮಾದರಿಯನ್ನು ಪ್ರಯೋಗಕ್ಕೆ ಒಳಪಡಿಸಿದಾಗ ಆಂಟಿಬಾಡಿ ಸೃಷ್ಟಿಯಾಗಿದ್ದ ಪ್ರಮಾಣವನ್ನು ಗುರುತಿಸಲಾಗಿದೆ. ಲಸಿಕೆ ಪಡೆದವರಲ್ಲಿ ಹೆಚ್ಚು ಪ್ರತಿಕಾಯಗಳು ಕಂಡುಬಂದಿವೆ ಎಂದು ಹೇಳಲಾಗಿದೆ.