ಕೊರೊನಾ ವೈರಸ್ ಎಲ್ಲರ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರ್ತಿದೆ. ಕೋವಿಡ್ -19 ಸೋಂಕು ಹರಡುವ ಭೀತಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ವಯಸ್ಕರೊಂದೇ ಅಲ್ಲ ಮುಗ್ಧ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲಾಕ್ ಡೌನ್, ಬಂದ್ ಆಗಿರುವ ಶಾಲೆ, ಆನ್ಲೈನ್ ಕ್ಲಾಸ್, ಸ್ನೇಹಿತರು, ಸಂಬಂಧಿಕರಿಂದ ದೂರವಾದ ಮಕ್ಕಳು ಸರಿಯಾಗಿ ನಗಲು, ಆಟವಾಡಲು ಆಗ್ತಿಲ್ಲ. ಮಕ್ಕಳು ಖಿನ್ನತೆ, ಮಾನಸಿಕ ಅನಾರೋಗ್ಯಕ್ಕೆ ತುತ್ತಾಗ್ತಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಇಲಾಖೆಗಳಿಗೆ ಬರುವ ಮಕ್ಕಳ ಸಂಖ್ಯೆ ಶೇಕಡಾ 24 ರಷ್ಟು ಹೆಚ್ಚಾಗಿದೆ. ಇದರಲ್ಲಿ 5 ರಿಂದ 11 ವರ್ಷದೊಳಗಿನ ಮಕ್ಕಳು ಸೇರಿದ್ದಾರೆ. ಮಕ್ಕಳ ಮಾನಸಿಕ ಆರೋಗ್ಯ ಹದಗೆಡುತ್ತಿರುವುದು ಪೋಷಕರ ಚಿಂತೆಗೆ ಕಾರಣವಾಗಿದೆ.
ಅಮೆರಿಕನ್ ಫೌಂಡೇಶನ್ ಫಾರ್ ಸೂಸೈಡ್ ಪ್ರಿವೆನ್ಷನ್‌ನ ಕ್ರಿಸ್ಟಿನ್ ಮೌಟಿಯರ್ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದೆ. ಮಕ್ಕಳನ್ನು ನೋಡಿಕೊಳ್ಳುತ್ತೀರಿ ಮತ್ತು ಅವರನ್ನು ಪ್ರೀತಿಸುತ್ತೀರಿ ಎಂದು ಅವರಿಗೆ ಮನವರಿಕೆ ಮಾಡಬೇಕಿದೆ. ಆಗ ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಎಲ್ಲ ಸವಾಲನ್ನು ಒಟ್ಟಿಗೆ ನಿಭಾಯಿಸಬಹುದು ಎಂದು ಅವರಿಗೆ ಧೈರ್ಯ ಹೇಳಬೇಕು.
ಒಂದು ವೇಳೆ ಮಕ್ಕಳು ಸಮಸ್ಯೆ ಹೇಳಿಕೊಂಡಲ್ಲಿ ಪರಿಹಾರ ಹುಡುಕುವುದು ಸುಲಭ. ಕೆಲವೊಮ್ಮೆ ಮಕ್ಕಳು ಮಾತನಾಡಲು ಹಿಂಜರಿಯುತ್ತಾರೆ. ಆಗ ಮಕ್ಕಳ ವೈದ್ಯರು, ಶಿಕ್ಷಕರ ಜೊತೆ ಮಾತನಾಡಿಸಿ. ಮಕ್ಕಳ ಸಮಸ್ಯೆ ಏನು ಎಂಬುದನ್ನು ತಿಳಿದುಕೊಂಡು ತಜ್ಞರ ಸಲಹೆ ಪ್ರಕಾರ ನಡೆದುಕೊಳ್ಳಿ.
ಮಕ್ಕಳನ್ನು ಏಕಾಂಗಿಯಾಗಿ ಬಿಡುವುದನ್ನು ತಪ್ಪಿಸಿ. ಮಾನಸಿಕವಾಗಿ ಕುಗ್ಗಿರುವ ಮಕ್ಕಳನ್ನು ಏಕಾಂಗಿಯಾಗಿ ಬಿಟ್ಟಾಗ ಅವರು ಮತ್ತಷ್ಟು ಕುಗ್ಗುತ್ತಾರೆ. ತೊಂದರೆ ಹೇಳಿಕೊಳ್ಳಲು ಯಾರೂ ಇಲ್ಲ ಎಂಬ ಭಾವನೆ ಮೂಡುತ್ತದೆ. ಇದು ಅವರ ಮನಸ್ಥಿತಿಯನ್ನು ಮತ್ತಷ್ಟು ಹಾಳು ಮಾಡುತ್ತದೆ. ಮಕ್ಕಳಿಗೆ ನಕಾರಾತ್ಮಕ ವಿಷಯ ತುಂಬುವ ಬದಲು ಸಕಾರಾತ್ಮಕ ವಿಷಯ ತಿಳಿಸಿ.