ಲಂಡನ್: ಬ್ರಿಟನ್ ನಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿದ್ದು, ಅಂಕೆಗೆ ಸಿಗದೇ ಅತಿವೇಗವಾಗಿ ಹರಡುತ್ತಿದೆ. ಪರಿಸ್ಥಿತಿ ಕೈಮೀರಿದ ಕಾರಣದಿಂದಾಗಿ ಮತ್ತೆ ಲಾಕ್ ಡೌನ್ ಜಾರಿ ಮಾಡಲಾಗಿದೆ.
ಹೊಸ ಕೊರೋನಾ ವೈರಸ್ ನಲ್ಲಿ 23 ಬದಲಾವಣೆಗಳನ್ನು ತಜ್ಞರು ಗುರುತಿಸಿದ್ದಾರೆ. ಇದು ಶೇಕಡ 70 ರಷ್ಟು ವೇಗವಾಗಿ ಹರಡುತ್ತಿದೆ. ನಿಯಂತ್ರಣ ಕಷ್ಟವಾಗಿ ಪರಿಸ್ಥಿತಿ ಕೈಮೀರಿದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ.
ಬ್ರಿಟನ್ ನಂತರ ದಕ್ಷಿಣ ಆಫ್ರಿಕಾದಲ್ಲಿ ಹೊಸ ಪ್ರಭೇದದ ಸೋಂಕು ಕಾಣಿಸಿಕೊಂಡಿದ್ದು, ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್ ವಿಮಾನಗಳಿಗೆ ನಿರ್ಬಂಧ ಹೇರಲಾಗಿದೆ. ಜರ್ಮನಿ ಮತ್ತು ಇಟಲಿ ಕೂಡ ವಿಮಾನ ಸಂಚಾರಕ್ಕೆ ನಿಷೇಧ ಹೇರಲು ಮುಂದಾಗಿದೆ.
ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಆಚರಣೆ ಮೇಲೆ ನಿರ್ಬಂಧ ಹೇರಲಾಗಿದೆ. ಲಂಡನ್ ನಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಹೊಸ ಪ್ರಭೇದದ ವೈರಸ್ ಶೇಕಡ 70 ರಷ್ಟು ವೇಗದಲ್ಲಿ ಹರಡುತ್ತಿದೆ. ಈ ಸೋಂಕು ಪ್ರಾಣ ತೆಗೆಯುತ್ತದೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.