ಕೋವಿಡ್-19ನ ಮೂರನೇ ಅಲೆಯ ಭೀತಿ ಮೂಡಿಸುತ್ತಿರುವ ಒಮಿಕ್ರಾನ್ ರೂಪಾಂತರಿಯಿಂದಾಗಿ ದಿನನಿತ್ಯದ ಕೇಸುಗಳ ಸಂಖ್ಯೆ ಭಾನುವಾರದಿಂದ ಆಚೆಗೆ ಮೂರು ಪಟ್ಟಾಗಿ ಬೆಳೆಯುತ್ತಿದೆ. ಅದರ ಹಿಂದಿನ ವಾರಕ್ಕೆ ಹೋಲಿಸಿದಲ್ಲಿ, ಕಳೆದ ವರ್ಷದ ಕೊನೆಯ ವಾರದ ಪ್ರಕರಣಗಳ ಸಂಖ್ಯೆಯಲ್ಲಿ 181% ಏರಿಕೆ ಕಂಡು ಬಂದಿದೆ.
ಡಿಸೆಂಬರ್ 27-ಜನವರಿ 2ರ ನಡುವಿನ ಅವಧಿಯಲ್ಲಿ ಭಾರತದಲ್ಲಿ 1.3 ಲಕ್ಷ ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ 12 ವಾರಗಳಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ. ಇದರ ಹಿಂದಿನ ವಾರದಲ್ಲಿ 46,073 ಪಾಸಿಟಿವ್ ಕೇಸುಗಳು ದಾಖಲಾಗಿದ್ದವು ಹಾಗೂ ಇದು ಮೇ 2020ರಿಂದ ಕಂಡು ಬಂದಿದ್ದ ಅತ್ಯಂತ ಕಡಿಮೆ ಸಂಖ್ಯೆಯ ಕೇಸುಗಳಾಗಿದ್ದವು.
ದೇಶದಲ್ಲಿ ಸಾಂಕ್ರಮಿಕ ಆರಂಭಗೊಂಡಾಗಿನಿಂದ ಕಂಡು ಬಂದ ಅತ್ಯಂತ ತ್ವರಿತ ಏರಿಕೆ ಇದಾಗಿದೆ. ಏಪ್ರಿಲ್ 5-11, 2021ರಲ್ಲಿ, ಕೋವಿಡ್-19ನ ಎರಡನೇ ಅಲೆಯ ವೇಳೆ ಕೇಸುಗಳ ಸಂಖ್ಯೆಯಲ್ಲಿ 71%ನಷ್ಟು ಏರಿಕೆಯಾಗಿದ್ದು ಇದುವರೆಗಿನ ಅತ್ಯಂತ ತ್ವರಿತ ಹೆಚ್ಚಳವಾಗಿತ್ತು.
ಶನಿವಾರ 27,747ರಷ್ಟು ಕಂಡು ಬಂದಿದ್ದ ಹೊಸ ಕೇಸುಗಳು ಭಾನುವಾರದಂದು 33,703 ಹೊಸ ಕೇಸುಗಳಿಗೆ ಏರಿಕೆಯಾಗಿತ್ತು.