ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರ್ತಿದೆ. ಕೊರೊನಾ ಲಸಿಕೆ ಅಭಿಯಾನವೂ ಚುರುಕು ಪಡೆದಿದೆ. ಸ್ತನಪಾನ ಮಾಡಿಸುವ ತಾಯಂದಿರಿಗೂ ಈಗ ಕೊರೊನಾ ಲಸಿಕೆ ಹಾಕಲಾಗ್ತಿದೆ. ಈ ವೇಳೆ ತಾಯಂದಿರಿಗೆ ಅನೇಕ ಪ್ರಶ್ನೆಗಳು ಕಾಡ್ತಿವೆ. ಲಸಿಕೆ ನಂತ್ರ ಜ್ವರ ಬಂದಲ್ಲಿ ಸ್ತನಪಾನ ಮಾಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಕಾಡ್ತಿದೆ.
ಕೊರೊನಾ ಲಸಿಕೆ ನಂತ್ರ ಕೆಲವರಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಜ್ವರ ಬಂದಲ್ಲಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಜ್ವರ ಕೆಲ ಗಂಟೆ ಅಥವಾ ಒಂದು ದಿನವಿರುತ್ತದೆ. ಈ ಮಧ್ಯೆ ಮಕ್ಕಳಿಗೆ ಹಾಲುಣಿಸುವುದನ್ನು ಬಿಡಬೇಡಿ. ಮಕ್ಕಳನ್ನು ಖಾಲಿ ಹೊಟ್ಟೆಯಲ್ಲಿ ಬಿಡಬೇಡಿ ಎಂದು ತಜ್ಞರು ಹೇಳಿದ್ದಾರೆ.
ಒಂದು ವೇಳೆ ಒಂದು ದಿನಕ್ಕಿಂತ ಹೆಚ್ಚು ಕಾಲ ಜ್ವರವಿದ್ದರೆ ಅಥವಾ ಜ್ವರ ಏರುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ಕೈಗಳನ್ನು ಸ್ವಚ್ಛವಾಗಿ ತೊಳೆದು, ಮಾಸ್ಕ್ ಧರಿಸಿ ಮಕ್ಕಳಿಗೆ ಹಾಲುಣಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದೇ ವೇಳೆ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಕಾಡಲಿದೆ ಎಂಬ ಭಯವಿದೆ. ಪಾಲಕರು ಹೆಚ್ಚು ಭಯಪಡಬೇಕಾಗಿಲ್ಲ. ಒಂದು ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಕಲಿತಿದ್ದು, ಈಗಾಗಲೇ ಮುಂದಿನ ಅಲೆ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.