ನವದೆಹಲಿ: ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಸೇರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ಸಿಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಜ್ಞರು, ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ತುರ್ತು ಬಳಕೆಗೆ ಅನುಮೋದನೆ ನೀಡಲಾದ ಎರಡು ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಇದು ಹೆಮ್ಮೆಯ ವಿಷಯವಾಗಿದೆ. ಆತ್ಮನಿರ್ಭರ ಭಾರತದ ಕನಸನ್ನು ಈಡೇರಿಸಲು ನಮ್ಮ ವೈಜ್ಞಾನಿಕ ಸಮುದಾಯದ ಉತ್ಸಾಹವನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ.
ಕೊರೋನಾ ವಿರುದ್ಧದ ಹೋರಾಟದಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಿದ ವೈದ್ಯರು, ವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ಪೊಲೀಸ್ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು ಮತ್ತು ಎಲ್ಲಾ ಕೊರೋನಾ ವಾರಿಯರ್ಸ್ ಗಳಿಗೆ ಕೃತಜ್ಞತೆ ಸಲ್ಲಿಸಿದ್ದು, ಸಂಕಷ್ಟದ ಸಮಯದಲ್ಲಿ ಅನೇಕ ಜೀವಗಳನ್ನು ಉಳಿಸಿದ್ದಕ್ಕಾಗಿ ಅವರೆಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.