
ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ 9, 10 ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಾಲೇಜ್ ಆರಂಭವಾಗಲಿವೆ. ಒಂದರಿಂದ ಎಂಟನೇ ತರಗತಿಗಳನ್ನು ಕೂಡ ಆರಂಭಿಸುವ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಕೋವಿಡ್ ಬಗ್ಗೆ ಸರ್ವೆ ನಡೆಸಿದ ನಂತರವೇ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳ ಆರಂಭ ಕುರಿತಾಗಿ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುತ್ತದೆ. 9, 10 ನೇ ತರಗತಿ ಹಾಗೂ ಪಿಯುಸಿ ತರಗತಿಗಳು ಸೋಮವಾರದಿಂದ ಶುರುವಾಗಲಿದ್ದು, ನಂತರದ ಪರಿಸ್ಥಿತಿ ಆಧರಿಸಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಕುರಿತು ಸರ್ವೇ ನಡೆಸಲಾಗುತ್ತದೆ. ಎಷ್ಟು ಮಕ್ಕಳಿಗೆ ಕೊರೊನಾ ಸೋಂಕು ತಗುಲಿತ್ತು. ಶಾಲೆಗಳಲ್ಲಿ ಯಾವ ರೀತಿ ಸಮಸ್ಯೆಯಾಗಿತ್ತು ಎಂಬುದರ ಬಗ್ಗೆ ವರದಿ ಪಡೆಯಲಾಗುತ್ತದೆ. ಮಕ್ಕಳು ಶಾಲೆಗೆ ಬರಲು ಉತ್ಸಾಹ ತೋರಿದ್ದಾರೆ. ಪೋಷಕರು ಕೂಡ ಶಾಲೆ ಆರಂಭಿಸಲು ಸಲಹೆ ನೀಡಿದ್ದಾರೆ. ಕೋವಿಡ್ ಬಗ್ಗೆ ಸರ್ವೆ ಮಾಡಿದ ತಕ್ಷಣ ರಾಜ್ಯದಲ್ಲಿ ಪ್ರಾಥಮಿಕ ಶಾಲೆ ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.